*ಪ್ರೇಮಿಗೆ ಜಾಮೀನು ಕೊಡಿಸಲು ಡ್ರಗ್ಸ್ ಸಾಗಾಟ*: *50 ಸಾವಿರದ ಆಮಿಷಕ್ಕೆ ಬಿದ್ದ ಯುವತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಜೈಲಿನಲ್ಲಿರುವ ಪ್ರೇಮಿಗೆ ಜಾಮೀನು ಕೊಡಿಸಲು ಹಣ ಹೊಂದಿಸುವ ಆಸೆಗೆ ಬಿದ್ದ ಯುವತಿ ಡ್ರಗ್ಸ್ ಸಾಗಾಟಕ್ಕೆ ಇಳಿದಿದ್ದಾಳೆ. ಸುರಕ್ಷಿತವಾಗಿ ಡ್ರಗ್ಸ್ ತಲುಪಿಸಿದರೆ 50 ಸಾವಿರ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಆದರೆ ಪೊಲೀಸರ ಕಾರ್ಯಾಚರಣೆಯಿಂದ ಈ ಜಾಲ ಬಯಲಾಗಿದ್ದು, ಡ್ರಗ್ಸ್ ಸಾಗಿಸುತ್ತಿದ್ದ ಯುವತಿ ಮಾತ್ರವಲ್ಲದೆ ಜಾಲದ ಪ್ರಮುಖ ಆರೋಪಿ ಎನ್ನಲಾದ ಬಶೀರ್ ಕೂಡ ಈಗ ಪೊಲೀಸರ ವಶದಲ್ಲಿದ್ದಾನೆ.
ಯುವತಿಯ ಪ್ರಿಯತಮ ಮೂರು ತಿಂಗಳ ಹಿಂದೆ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿತನಾಗಿದ್ದ ಎನ್ನಲಾಗಿದೆ. ಪ್ರಿಯತಮನಿಗೆ ಜಾಮೀನು ಕೊಡಿಸಲು ಹಣದ ಅಗತ್ಯವಿದ್ದ ಕಾರಣ ಯುವತಿ ಡ್ರಗ್ ಸಾಗಾಟಕ್ಕೆ ಒಪ್ಪಿಕೊಂಡಿದ್ದಳು. ಬೆಂಗಳೂರಿನಿಂದ ವಿಜಯವಾಡಕ್ಕೆ ಡ್ರಗ್ಸ್ ತಲುಪಿಸಿದರೆ 50 ಸಾವಿರ ರೂಪಾಯಿ ನೀಡುವುದಾಗಿ ಡ್ರಗ್ಸ್ ದಂದೆಯ ಪ್ರಮುಖ ಆರೋಪಿ ಬಶೀರ್ ಆಮಿಷ ಒಡ್ಡಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ನಾಗಸೌಮ್ಯ ಎಂಬ ಯುವತಿಯನ್ನು ವಿಜಯವಾಡ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಆಕೆ ಬೆಂಗಳೂರಿನಿಂದ ಸುಮಾರು 110 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದಳು ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
ಈ ಬಗ್ಗೆ ಮುಂಚಿತವಾಗಿ ಖಚಿತ ಮಾಹಿತಿ ಪಡೆದ ಸರ್ಕಾರಿ ರೈಲ್ವೆ ಪೊಲೀಸರು (GRP) ಮತ್ತು ಈಗಲ್ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ವಿಜಯವಾಡ ರೈಲು ನಿಲ್ದಾಣದಲ್ಲಿ ನಿಗಾ ಇರಿಸಿ ನಾಗಸೌಮ್ಯಳನ್ನು ಬಂಧಿಸಿ, ಡ್ರಗ್ಸ್ ವಶಪಡಿಸಿಕೊಂಡಿವೆ.
ಯುವತಿಯನ್ನು ವಿಚಾರಣೆ ನಡೆಸಿದಾಗ ಈ ಸಾಗಾಟದ ಹಿಂದೆ ಬಶೀರ್ ಪ್ರಮುಖ ಪಾತ್ರ ವಹಿಸಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಬಶೀರ್ನನ್ನೂ ಬಂಧಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ವಿದ್ಯಾರ್ಥಿಗಳ ಮೂಲಕ ಡ್ರಗ್ಸ್ ಮಾರಾಟ ಜಾಲ ನಡೆಸುತ್ತಿದ್ದಾನೆ ಎಂಬ ಆರೋಪ ಬಶೀರ್ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಕೌಂಟರ್ ಇಂಟೆಲಿಜೆನ್ಸ್ ವಿಭಾಗಕ್ಕೂ ಈ ಹಿಂದೆ ಮಾಹಿತಿ ಲಭಿಸಿತ್ತು ಎನ್ನಲಾಗಿದೆ.
ಬಶೀರ್ ಬಂಧನದ ಬಳಿಕ ಪೊಲೀಸರು ಡ್ರಗ್ಸ್ ಜಾಲದ ಇತರ ಸಂಪರ್ಕಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಕಾಲ್ ಡೇಟಾ, ಸಂಪರ್ಕ ಪಟ್ಟಿ ಹಾಗೂ ಹಣಕಾಸಿನ ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ. ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ಬೇರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಸುಲಭವಾಗಿ ಹಣ ಗಳಿಸುವ ಆಸೆಗೆ ಯುವಜನರು ಡ್ರಗ್ಸ್ ಸಾಗಾಟದಂತಹ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದು ಆತಂಕ ಮೂಡಿಸಿದೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುವ ಜಾಲ ಎಷ್ಟು ವಿಸ್ತರಿಸಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




