Kannada NewsLatestWorld

*ಅಪ್ರಾಪ್ತನಿಂದ ಗುಂಡಿನ ದಾಳಿ*: *ಮೂವರು ಮಕ್ಕಳು, ಶಿಕ್ಷಕ ಸೇರಿ ಐವರು ಸಾವು*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕನೊಬ್ಬ ಶಾಲೆಯಲ್ಲಿ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು, ಓರ್ವ ಶಿಕ್ಷಕ ಸೇರಿ ಐವರು ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ.

16 ವರ್ಷದ ಅಪ್ರಾಪ್ತ ಶೂಟರ್ ಈ ಕೃತ್ಯ ಎಸಗಿದ್ದು, ಸ್ಥಳೀಯರ ಪ್ರತಿರೋಧಕ್ಕೆ ಬಲಿಯಾಗಿದ್ದಾನೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಅಮೆರಿಕದ ಒರೆಗಾನ್ ಪ್ರಾಂತ್ಯದ ಬೆಂಡ್ ನಗರದಲ್ಲಿರುವ ಸಿಲ್ವರ್ ರೈಲ್ ಎಲಿಮೆಂಟರಿ ಶಾಲೆ ಯಲ್ಲಿ ಅಪ್ರಾಪ್ತ ಬಾಲಕನಿಂದ ಸರಣಿ ಗುಂಡಿನ ದಾಳಿ ನಡೆದಿದ್ದು, ಮೂವರು ಪುಟ್ಟ ಮಕ್ಕಳು ಹಾಗೂ ಒಬ್ಬ ಶಿಕ್ಷಕ ಸೇರಿದಂತೆ ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ.

ಮೃತಪಟ್ಟ ಮಕ್ಕಳನ್ನು 5, 8 ಮತ್ತು 11 ವರ್ಷ ವಯಸ್ಸಿನವರೆಂದು ಗುರುತಿಸಲಾಗಿದೆ. ಘಟನೆಯಲ್ಲಿ 7 ವರ್ಷದ ಮತ್ತೊಬ್ಬ ಬಾಲಕಿ ಹಾಗೂ 54 ವರ್ಷದ ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಶಾಲಾ ಆವರಣದ ಸಮೀಪ ನಿಲ್ಲಿಸಲಾಗಿದ್ದ ಕಾರೊಂದರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸುತ್ತಿದ್ದಾನೆ ಎಂದು ಪೊಲೀಸರ ತುರ್ತು ಸಹಾಯವಾಣಿ ‘911’ ಗೆ ಕರೆಗಳು ಬಂದವು. ಕೆಲವೇ ನಿಮಿಷಗಳಲ್ಲಿ ಶಂಕಿತ ಶಸ್ತ್ರಸಜ್ಜಿತನಾಗಿ ಶಾಲೆಯ ಕಟ್ಟಡದೊಳಗೆ ನುಗ್ಗಿದ್ದ.

ಶಂಕಿತ ಕೈಯಲ್ಲಿ ಬಂದೂಕು ಹಿಡಿದು ಶಾಲೆಯೊಳಗೆ ಪ್ರವೇಶಿಸುವುದನ್ನು ಕಂಡ ಸ್ಥಳೀಯ ಸಮುದಾಯದ ಪ್ರಜೆಯೊಬ್ಬರು ತಕ್ಷಣವೇ ಆತನ ಮೇಲೆ ಗುಂಡು ಹಾರಿಸಿ, ಶಾಲೆಯೊಳಗೆ ಹಿಂಬಾಲಿಸಿ ಆತನನ್ನು ಹತ್ಯೆಗೈದಿದ್ದಾರೆ ಎಂದು ಬೆಂಡ್ ಪೊಲೀಸ್ ಮುಖ್ಯಸ್ಥ ಮೈಕ್ ಕ್ರಾಂಟ್ಜ್ ತಿಳಿಸಿದ್ದಾರೆ. ದಾಳಿ ನಡೆಸಿದ 16 ವರ್ಷದ ಅಪ್ರಾಪ್ತ ಶೂಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತ ಬಳಸಿದ ಬಂದೂಕಿನ ಮಾದರಿ, ಮದ್ದುಗುಂಡುಗಳು ಮತ್ತು ಶಾಲೆಯೊಂದಿಗೆ ಆತನಿಗಿದ್ದ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button