Kannada NewsKarnataka NewsLatest

*ನಕಲಿ ಅಂಕಪಟ್ಟಿ ನೀಡಿ ನೌಕರಿ ಗಿಟ್ಟಿಸಿಕೊಂಡಿದ್ದ ಆರೋಗ್ಯ ಇಲಾಖೆ 52 ಸಿಬ್ಬಂದಿ ಸಸ್ಪೆಂಡ್*: *ಏನಿದು ಪ್ರಕರಣ?*

ಪ್ರಗತಿವಾಹಿನಿ ಸುದ್ದಿ: ಆರೋಗ್ಯ ಇಲಾಖೆಯ ಬೃಹತ್ ಹಗರಣವೊಂದು ಬಯಲಾಗಿದೆ. 10 ವರ್ಷಗಳ ಹಿಂದೆ ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದ ನೌಕರರ ಜಾಲ ಪತ್ತೆಯಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹತ್ತು ವರ್ಷಗಳ ಹಿಂದೆ ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ವೃಂದದಡಿ ನೇಮಕಗೊಂಡಿದ್ದ 52 ಗ್ರೂಪ್-ಡಿ ಸಿಬ್ಬಂದಿ ನಕಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಗಳನ್ನು ನೀಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ವಂಚನೆ ಸಾಬೀತಾಗುತ್ತಿದ್ದಂತೆ ಇಲಾಖೆಯು ಎಲ್ಲ 52 ನೌಕರರನ್ನು ತಕ್ಷಣವೇ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. 2015ರ ಮಾರ್ಚ್‌ನಲ್ಲಿ ಗ್ರೂಪ್-ಡಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿತ್ತು. ಅದೇ ವರ್ಷದ ನವೆಂಬರ್‌ನಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡು, 2016ರ ಜೂನ್‌ನಲ್ಲಿ ನೇಮಕಾತಿ ಆದೇಶಗಳನ್ನು ನೀಡಲಾಗಿತ್ತು. ಸಿಬ್ಬಂದಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

2023ರಲ್ಲಿ ಬಂದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಹಗರಣ ಹೊರಬಂದಿದೆ. ಕೇವಲ 230 ಅಂಕಗಳನ್ನು ಗಳಿಸಿದ್ದ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳ ಮೂಲಕ ತಮ್ಮ ಅಂಕಗಳನ್ನು 625ಕ್ಕೆ 560ರಿಂದ 586ರವರೆಗೆ ಏರಿಕೆ ಮಾಡಿಕೊಂಡಿದ್ದರು. ಅಲ್ಲದೆ, ಅಂದು ಮಂಡಳಿಯಿಂದ ನೀಡಲಾಗಿದೆ ಎನ್ನಲಾದ ದೃಢೀಕರಣ ಪತ್ರಗಳು ಕೂಡ ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸೆಪ್ಟೆಂಬರ್ 22ರ ಆದೇಶದಂತೆ ಆರೋಪಿ ನೌಕರರಿಗೆ ನೋಟಿಸ್ ನೀಡಲಾಗಿದ್ದರೂ ಸೂಕ್ತ ಉತ್ತರ ನೀಡಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಗಂಭೀರ ಆರೋಪದಡಿ ಶಿಸ್ತು ಕ್ರಮ ಕೈಗೊಂಡಿರುವ ಇಲಾಖೆ, ನೌಕರರನ್ನು ಅಮಾನತುಗೊಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button