Film & EntertainmentKannada NewsKarnataka NewsLatest

*ಸೋನು ನಿಗಮ್‌ಗೆ ಕರವೇ ಖಡಕ್ ತಿರುಗೇಟು*: *ಕನ್ನಡಿಗರ ಕ್ಷಮೆ ಕೇಳುವಂತೆ ಆಗ್ರಹ!*

ಪ್ರಗತಿವಾಹಿನಿ ಸುದ್ದಿ: ಕನ್ನಡ ಹಾಡಿಗೆ ಮನವಿ ಮಾಡಿದ್ದನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿ ವಿವಾದಕ್ಕೀಡಾಗಿದ್ದ ಗಾಯಕ ಸೋನು ನಿಗಮ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ತಿರುಗೇಟು ನೀಡಿದ್ದಾರೆ. ಸುದೀರ್ಘ ಬಹಿರಂಗ ಪತ್ರದ ಮೂಲಕ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿರುವ ಸೋನು ನಿಗಮ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ನಾರಾಯಣ ಗೌಡ, ಕನ್ನಡಿಗರ ಪ್ರೀತಿಯಿಂದ ಬೆಳೆದ ಗಾಯಕ ಈಗ ಅದೇ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಹಾಡು ಹಾಡುವಂತೆ ಕೇಳಿದ್ದನ್ನು ಪಹಲ್ಗಾಮ್ ದಾಳಿಗೆ ಹೋಲಿಸಿರುವುದಕ್ಕೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ ಎಂದು ನಾರಾಯಣ ಗೌಡ ಕಿಡಿಕಾರಿದ್ದಾರೆ. ಒಂದು ಇಡೀ ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸುವುದು ಮತ್ತು ಹಾಡಿನ ಬೇಡಿಕೆಯನ್ನು ಭಯೋತ್ಪಾದಕ ಕೃತ್ಯಕ್ಕೆ ಕಾರಣವೆಂಬಂತೆ ಬಿಂಬಿಸುವುದು ಅತ್ಯಂತ ಆಕ್ಷೇಪಾರ್ಹ ಎಂದು ಟೀಕಿಸಿದ್ದಾರೆ. ಇಂತಹ ಹೇಳಿಕೆಗೆ ದೇಶಭಕ್ತಿಯ ನೆಪ ನೀಡುವುದು ತಪ್ಪನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರು ಸೋನು ನಿಗಮ್‌ಗೆ ನೀಡಿರುವ ಪ್ರೀತಿ ಮತ್ತು ಬೆಂಬಲವನ್ನು ನೆನಪಿಸಿದ ನಾರಾಯಣ ಗೌಡ, ಕನ್ನಡ ನಾಡಿನಲ್ಲಿ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುವುದರ ಜೊತೆಗೆ ಲಕ್ಷಾಂತರ ಅಭಿಮಾನಿಗಳ ಪ್ರೀತಿಯನ್ನೂ ಗಾಯಕ ಗಳಿಸಿದ್ದಾರೆ ಎಂದು ಹೇಳಿದ್ದಾರೆ. ಇಷ್ಟೆಲ್ಲ ಪ್ರೀತಿ ನೀಡಿದ ಕನ್ನಡ ಮಣ್ಣಿನ ಭಾವನೆಗಳಿಗೆ ಧಕ್ಕೆ ತರುವುದು ಎಷ್ಟು ಸರಿ ಎಂಬುದನ್ನು ಸೋನು ನಿಗಮ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಹಲ್ಗಾಮ್ ದಾಳಿಗೂ ಮುನ್ನ ಕರ್ನಾಟಕದ ದಂಪತಿ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸೋನು ನಿಗಮ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ನಾರಾಯಣ ಗೌಡ ಆರೋಪಿಸಿದ್ದಾರೆ. ಪಹಲ್ಗಾಮ್ ದಾಳಿಯ ಭೀಕರತೆಯಿಂದ ಇಡೀ ದೇಶವೇ ದುಃಖಕ್ಕೀಡಾಗಿತ್ತು. ದಾಳಿಯಲ್ಲಿ ಮೃತಪಟ್ಟ ಅಮಾಯಕ ಜೀವಗಳ ನೋವು ಕನ್ನಡಿಗರಿಗೂ ಅರ್ಥವಾಗಿದೆ. ಅದಕ್ಕಾಗಿಯೇ ಸೋನು ನಿಗಮ್ ನೀಡಿದ ಹೇಳಿಕೆಯನ್ನು ವಿರೋಧಿಸಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಹುತಾತ್ಮರ ಹೆಸರಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಬದಲು, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಕನ್ನಡಿಗರ ದೇಶಭಕ್ತಿಯನ್ನು ಪ್ರಶ್ನಿಸುವ ಅಗತ್ಯವಿಲ್ಲ ಎಂದು ನಾರಾಯಣ ಗೌಡ ತಿರುಗೇಟು ನೀಡಿದ್ದಾರೆ. ಸ್ವಂತ ಭಾಷೆಯನ್ನು ಪ್ರೀತಿಸುವುದು ದೇಶವನ್ನು ವಿಭಜಿಸುವುದಿಲ್ಲ; ಬದಲಾಗಿ ಭಾರತದ ವೈವಿಧ್ಯತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬುದು ಕನ್ನಡಿಗರ ನಿಲುವು ಎಂದು ಹೇಳಿದ್ದಾರೆ. ದೇಶಭಕ್ತಿಯ ಹೆಸರಿನಲ್ಲಿ ಭಾಷಾ ವೈವಿಧ್ಯತೆಯನ್ನು ಅವಮಾನಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಸೋನು ನಿಗಮ್ ಮಾಡಬೇಕಾದದ್ದು ಕನ್ನಡಿಗರ ಮುಂದೆ ಕ್ಷಮೆ ಕೇಳುವುದೊಂದೇ ಎಂದು ನಾರಾಯಣ ಗೌಡ ಆಗ್ರಹಿಸಿದ್ದಾರೆ. ಕನ್ನಡಿಗರನ್ನೇ ಅಲ್ಲದೆ ಕನ್ನಡ ಮಣ್ಣನ್ನೂ ಅಪಮಾನಿಸಿದ ಹೇಳಿಕೆಗೆ ತಲೆಬಾಗಿ ಕ್ಷಮೆ ಕೋರಬೇಕು ಮತ್ತು ಮುಂದೆ ಇಂತಹ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ಎಚ್ಚರಿಸಿದ್ದಾರೆ. ದೇಶಭಕ್ತಿ, ಧರ್ಮ ಹಾಗೂ ಹುತಾತ್ಮರ ಹೆಸರಿನ ಹಿಂದೆ ನಿಂತು ಸ್ವಯಂ ಸಮರ್ಥನೆ ಮಾಡಿಕೊಳ್ಳುವುದನ್ನು ಕನ್ನಡಿಗರು ಒಪ್ಪುವುದಿಲ್ಲ ಎಂದಿದ್ದಾರೆ.

ಸೋನು ನಿಗಮ್ ಉತ್ತಮ ಗಾಯಕ ಎಂಬುದರಲ್ಲಿ ಎರಡು ಮಾತಿಲ್ಲ; ಕನ್ನಡ ಚಿತ್ರರಂಗದ ಸಂಗೀತಕ್ಕೆ ನೀಡಿರುವ ಕೊಡುಗೆಯೂ ಅಪಾರವಾಗಿದೆ ಎಂದು ನಾರಾಯಣ ಗೌಡ ಹೇಳಿದ್ದಾರೆ. ಹಾಡುಗಳಿಗೆ ಜೀವ ತುಂಬುವಾಗ ತೋರುವ ಸೂಕ್ಷ್ಮತೆಯನ್ನು ಸಾರ್ವಜನಿಕವಾಗಿ ಮಾತನಾಡುವಾಗಲೂ ತೋರಬೇಕು ಎಂಬುದಷ್ಟೇ ಕನ್ನಡಿಗರ ನಿರೀಕ್ಷೆ ಎಂದು ತಿಳಿಸಿದ್ದಾರೆ. ಕನ್ನಡಿಗರ ದೇಶಭಕ್ತಿ ಮತ್ತು ದೇಶಕ್ಕಾಗಿ ಸಲ್ಲಿಸಿದ ತ್ಯಾಗದ ಬಗ್ಗೆ ಮಾಹಿತಿ ಬೇಕಿದ್ದರೆ ಅದನ್ನೂ ಒದಗಿಸಲು ಸಿದ್ಧ ಎಂದು ಹೇಳುವ ಮೂಲಕ ಸೋನು ನಿಗಮ್‌ಗೆ ನಾರಾಯಣ ಗೌಡ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button