*ನಕಲಿ ದಾಖಲೆ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳುವ ಯತ್ನ: 288 ಉಪನ್ಯಾಸಕರು ಆಯ್ಕೆ ಪ್ರಕ್ರಿಯೆಯಿಂದ ಹೊರಕ್ಕೆ*

ಪ್ರಗತಿವಾಹಿನಿ ಸುದ್ದಿ: ನಕಲಿ ದಾಖಲೆ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ 288 ಅತಿಥಿ ಉಪನ್ಯಾಸಕರನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿ, ದಾಖಲೆಗಳನ್ನು ಸಲ್ಲಿಸಿರುವ ಅತಿಥಿ ಉಪನ್ಯಾಸಕರಲ್ಲಿ ಅಧಿಕೃತ ಪರಿಶೀಲನಾ ಕಾರ್ಯವಿಧಾನದ ಪ್ರಕಾರ ನಕಲಿ ಅಥವಾ ಅಮಾನ್ಯ ದಾಖಲೆಗಳನ್ನು ಸಲ್ಲಿಸಿದ್ದ 288 ಅತಿಥಿ ಉಪನ್ಯಾಸಕರನ್ನು 2026-27ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಸರ್ಕಾರಕ್ಕೆ ಸುಳ್ಳು ಮಾಹಿತಿ/ದಾಖಲೆ ನೀಡಿ ವಂಚನೆ ಎಸಗಲು ಪ್ರಯತ್ನಿಸಿರುವುದರಿಂದ ಅವರುಗಳ ವಿರುದ್ಧ ಭಾರತ ನ್ಯಾಯ ಸಂಹಿತೆಯಡಿ ಅನ್ವಯವಾಗುವ ನಿಬಂಧನೆಗಳಡಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪ್ರಾಂಶುಪಾಲರಿಗೆ ಸೂಚಿಸಲಾಗಿರುತ್ತದೆ ಎಂದು ತಿಳಿಸಿದೆ.
2025-26ನೇ ಸಾಲಿನಲ್ಲಿ ಆನ್ಲೈನ್ ಕೌನ್ಸಲಿಂಗ್ ಮೂಲಕ ಕಾಲೇಜು ಆಯ್ಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ 11,010 ಅತಿಥಿ ಉಪನ್ಯಾಸಕರುಗಳ ಸ್ನಾತಕೋತ್ತರ ಪದವಿ ಅಂಕಪಟ್ಟಿ ಮತ್ತು ಎನ್ಇಟಿ, ಎಸ್ಎಲ್ಇಟಿ, ಕೆ-ಎಸ್ಇ ಟಿ, ಪಿಎಚ್ಡಿ, ಎಂಫಿಲ್ ಹಾಗೂ ವಿಕಲಚೇತನ ಪ್ರಮಾಣ ಪತ್ರ ಮತ್ತು ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳನ್ನು ಅಧಿಕೃತ ಪರಿಶೀಲನಾ ಕಾರ್ಯವಿಧಾನದ (Standard Operating Procedure) (SOP) ಪ್ರಾಂಶುಪಾಲರ ಹಂತದಲ್ಲಿ ಪರಿಶೀಲನೆ ನಡೆಸಲಾಗಿರುತ್ತದೆ.
ಅದರಂತೆ, ಬಹುತೇಕ ಅತಿಥಿ ಉಪನ್ಯಾಸಕರ ದಾಖಲೆಗಳನ್ನು ಕಾಲೇಜುಗಳ ಹಂತದಲ್ಲಿ ಪ್ರಾಂಶುಪಾಲರ ನೇತೃತ್ವದ ಸಮಿತಿಗಳು ಪರಿಶೀಲಿಸಿದ್ದು, ಕೆಲವು ಅತಿಥಿ ಉಪನ್ಯಾಸಕರು ರಾಜೀನಾಮೆ, ಗೈರು ಹಾಜರಿ ಅನಾರೋಗ್ಯದ ಕಾರಣ ದಾಖಲೆಗಳನ್ನು ಸಲ್ಲಿಸದಿರುವ ಪ್ರಕರಣಗಳಲ್ಲಿ ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಪರಿಶೀಲನೆ ನಡೆಸಿರುವುದಿಲ್ಲ. ಅಲ್ಲದೆ ಹೊರ ರಾಜ್ಯದ ವಿಶ್ವವಿದ್ಯಾಲಯಗಳ ವಿದ್ಯಾರ್ಹತೆ ಅಂಕ ಪಟ್ಟಿಗಳ ನೈಜತೆ ವರದಿಗಾಗಿ ಆಯಾ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿದ್ದು ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದು ಇಲಾಖೆ ತಿಳಿಸಿದೆ.
ಸಹಾಯಕ ಇಲಾಖೆಯಲ್ಲಿ ಒಟ್ಟು 7187 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿದ್ದು ಇದರಲ್ಲಿ 5971 ಹುದ್ದೆಗಳು ಭರ್ತಿಯಾಗಿರುತ್ತವೆ. ಉಳಿದಂತೆ 1216 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಲ್ಲಿ ಪ್ರಸ್ತುತ 826 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ.
ಅದರಂತೆ 826 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಸಹಾಯಕ ಪ್ರಾಧ್ಯಾಪಕರ ನೇಮಕಾತಿ) (ವಿಶೇಷ) ನಿಯಮಗಳು, 2026 ಕರಡು ವಿಶೇಷ ನಿಯಮಗಳನ್ನು ರೂಪಿಸಲು ಕ್ರಮವಹಿಸಲಾಗುತ್ತಿದೆ.
ರಾಜ್ಯದ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಒಟ್ಟು 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 7187 ಸಹಾಯಕರ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 5971 ಹುದ್ದೆಗಳು ಭರ್ತಿಯಾಗಿರುತ್ತವೆ. ಉಳಿದಂತೆ 1216 ಹುದ್ದೆಗಳು ಸದ್ಯ ಖಾಲಿ ಇದೆ ಎಂದೂ ಮಾಹಿತಿ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




