CrimeKannada NewsKarnataka NewsLatest

*ದೇವಸ್ಥಾನದ ಎದುರು ಮಾಜಿ ರೌಡಿಶೀಟರ್‌ನಿಂದ ಮಹಿಳೆಯರ ಮೇಲೆ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಶ್ರೀ ಮಹಾಗಣಪತಿ ದೇವಸ್ಥಾನದ ಎದುರು ಹೂವಿನ ಅಂಗಡಿ ವಿಚಾರವಾಗಿ ಗಲಾಟೆ ನಡೆದಿದೆ. ಟೆಂಡರ್ ಮೂಲಕ ಹೂವಿನ ಸ್ಟಾಲ್ ಪಡೆದಿದ್ದ ಮಾಜಿ ರೌಡಿಶೀಟರ್ ರಾಘವ ಭಂಡಾರಿ, ಅಂಗಡಿ ಖಾಲಿ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಹೂವು ಮಾರಾಟ ಮಾಡುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಮಹಿಳೆಯರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸೌತಡ್ಕ ದೇವಸ್ಥಾನದ ಹೊರಭಾಗದಲ್ಲಿರುವ ಹೂವಿನ ಅಂಗಡಿಯ ಟೆಂಡರ್ ಅನ್ನು ಕೊಕ್ಕಡದ ರಾಘವ ಭಂಡಾರಿ ಪಡೆದಿದ್ದ. ಆದರೆ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಹಿಂದಿನಿಂದ ಹೂವಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯರು ಅಂಗಡಿ ಖಾಲಿ ಮಾಡಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರು ಕಡೆಯವರ ನಡುವೆ ವಿವಾದ ಉಂಟಾಗಿದೆ.

ಇಂದು ಅಂಗಡಿಗೆ ತೆರಳಿದ ರಾಘವ ಭಂಡಾರಿ, ಒಳಗೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೇವಸ್ಥಾನದ ಎದುರೇ ನಡೆದ ಈ ಘಟನೆಯಿಂದ ಸ್ಥಳೀಯವಾಗಿ ಗಲಾಟೆಯ ವಾತಾವರಣ ನಿರ್ಮಾಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮಹಿಳೆಯರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಹಿನ್ನೆಲೆ ಮತ್ತು ಹಲ್ಲೆಯ ಆರೋಪದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button