Kannada NewsKarnataka NewsLatest

*ಮೈಸೂರು ದಸರಾ ಕಂಬಳದಲ್ಲಿ ಸಸಿಹಿತ್ಲು ಕೋಣಗಳ ಚಿನ್ನದ ಓಟ*: *16 ಗ್ರಾಂ ಚಿನ್ನ ಗೆದ್ದ ಜೋಡಿ!*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಕಂಬಳ ಕೂಟ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯ ವೈಭವವನ್ನು ಸಾಂಸ್ಕೃತಿಕ ನಗರಿಯಲ್ಲಿ ಅನಾವರಣಗೊಳಿಸಿದೆ. ಕೋಣಗಳ ವೇಗದ ಓಟ, ಹಲಗೆಯ ಮೇಲೆ ನೀರು ಚಿಮ್ಮಿಸುವ ರೋಚಕ ಸ್ಪರ್ಧೆ ಹಾಗೂ ಸಾವಿರಾರು ಜನರ ಸಂಭ್ರಮ ಕಂಬಳಕ್ಕೆ ಮತ್ತಷ್ಟು ಕಳೆ ತಂದಿದೆ.

ಕೆನೆ ಹಲಗೆ ವಿಭಾಗದಲ್ಲಿ ಸಸಿಹಿತ್ಲು ವೆಂಕಟ ಪೂಜಾರಿ ಬೈಂದೂರುಗೆ ಸೇರಿದ ಕೋಣಗಳು ಪ್ರಥಮ ಸ್ಥಾನ ಪಡೆದು 16 ಗ್ರಾಂ ಚಿನ್ನದ ಪದಕ ಗೆದ್ದಿವೆ. ಕೋಣಗಳನ್ನು ಬೈಂದೂರು ಮಹೇಶ್ ಪೂಜಾರಿ ಯಶಸ್ವಿಯಾಗಿ ನಡೆಸಿದರು.

ಕೆನೆ ಹಲಗೆ ವಿಭಾಗದಲ್ಲಿ 6.5 ಮೀಟರ್ ಎತ್ತರದ ನಿಶಾನೆಗೆ ನೀರು ಚಿಮ್ಮಿಸಿ ಸಸಿಹಿತ್ಲು ಕೋಣಗಳು ಮೊದಲ ಸ್ಥಾನ ಪಡೆದವು. ವಾಮಂಜೂರು ನವೀನಚಂದ್ರ ಆಳ್ವಗೆ ಸೇರಿದ ಕೋಣಗಳು ದ್ವಿತೀಯ ಸ್ಥಾನ ಗಳಿಸಿದವು. ಈ ವಿಭಾಗದಲ್ಲಿ ಒಟ್ಟು 11 ಜೋಡಿ ಕೋಣಗಳು ಪಾಲ್ಗೊಂಡಿದ್ದು, ಸ್ಪರ್ಧೆಯ ರೋಚಕ ಕ್ಷಣಗಳನ್ನು ವೀಕ್ಷಕರು ಕಣ್ತುಂಬಿಕೊಂಡರು.

ನೇಗಿಲು ಹಿರಿಯ ವಿಭಾಗದಲ್ಲಿ ಎಂಬತ್ತು ಬಡಗಬೆಟ್ಟು ಶ್ರೀಕಾಂತ್ ಶೆಟ್ಟಿ ಪ್ರಥಮ ಸ್ಥಾನ ಪಡೆದರೆ, ಕಕ್ಕೆಪದವು ಪೆರ್ಗಾಲು ಬಾಬು ತನಿಯಪ್ಪ ಗೌಡ ದ್ವಿತೀಯ ಸ್ಥಾನ ಗಳಿಸಿದರು. ಮೊದಲ ಸ್ಥಾನ ಪಡೆದ ಕೋಣಗಳನ್ನು ಕುಂದಾಬಾರಂದಾಡಿ ಸ್ವರೂಪ್ ನಡೆಸಿದರೆ, ದ್ವಿತೀಯ ಸ್ಥಾನ ಪಡೆದ ಜೋಡಿಯನ್ನು ಕೃತಿಕ್ ಗೌಡ ಪೆರ್ಗಾಲ್ ಮುನ್ನಡೆಸಿದರು.

ನೇಗಿಲು ಕಿರಿಯ ವಿಭಾಗದಲ್ಲಿ ಉಡುಪಿ ಕಕ್ಕುಂಜೆ ರಾಧಾ ನಿಲಯದ ಸಂತೋಷ್ ಶಿವರಾಜ್ ಪೂಜಾರಿ ಪ್ರಥಮ ಸ್ಥಾನ ಪಡೆದರು. ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿದರು. ಕ್ರಮವಾಗಿ ಬೈಂದೂರು ವಿಶ್ವನಾಥ್ ದೇವಾಡಿಗ ಮತ್ತು ಕುಂದಬಾರಂದಾಡಿ ಮಾಸ್ತಿಕಟ್ಟೆ ಸ್ವರೂಪ್ ಕೋಣಗಳನ್ನು ನಡೆಸಿದರು.

ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌ಗೆ ಸೇರಿದ ರಾಜ ಮತ್ತು ಶಬರೀಷ ಕೋಣಗಳು ಪ್ರಥಮ ಸ್ಥಾನ ಪಡೆದವು. ಎರ್ಮಾಳ್ ಪುಚ್ಚೊಟ್ಟು ಬಾಲಚಂದ್ರ ಲೋಕಯ್ಯ ಶೆಟ್ಟಿಗೆ ಸೇರಿದ ಮಣಿ ಮತ್ತು ಜಿಂಕೆ ಕೋಣಗಳು ದ್ವಿತೀಯ ಸ್ಥಾನ ಗಳಿಸಿದವು. ಹಗ್ಗ ಕಿರಿಯ ವಿಭಾಗದಲ್ಲಿ ಪದವು ಕಾನಡ್ಕ ಪ್ಲೇವಿ ಡಿಸೋಜಾ ಮೊದಲ ಸ್ಥಾನ ಪಡೆದರೆ, ರೋಹಿತ್ ಹೆಗ್ಡೆ ಎರ್ಮಾಳ್ ದ್ವಿತೀಯ ಸ್ಥಾನ ಪಡೆದರು. ಈ ವಿಭಾಗಗಳಲ್ಲಿ ಕ್ರಮವಾಗಿ ಕೃತಿಕ್ ಗೌಡ, ಪಡುಸಾಂತುರು ಪ್ರಥ್ವಿರಾಜ್ ಪೂಜಾರಿ, ಕಾವೂರು ಸುದರ್ಶನ ಮತ್ತು ಶ್ರೀನಿವಾಸ ಗೌಡ ಕೋಣಗಳನ್ನು ನಡೆಸಿದರು.

ಅಡ್ಡಹಲಗೆ ವಿಭಾಗದಲ್ಲಿ ಇರುವೈಲು ದೊಡ್ಡಗುತ್ತು ಜಗದೀಶ್ ಶೆಟ್ಟಿ ಪ್ರಥಮ ಸ್ಥಾನ ಪಡೆದರು. ವಿಟ್ಲ ಕುಂಡಡ್ಕ ಮರುವಾಳ ಜಯಂತ್ ದಾಸ್ ದ್ವಿತೀಯ ಸ್ಥಾನ ಗಳಿಸಿದರು. ಪ್ರಥಮ ಸ್ಥಾನ ಪಡೆದ ಕೋಣಗಳನ್ನು ತೆಕ್ಕಟ್ಟೆ ಸುದೀರ್ ದೇವಾಡಿಗ ಹಲಗೆ ಏರಿಸಿ ನಡೆಸಿದರೆ, ದ್ವಿತೀಯ ಸ್ಥಾನ ಪಡೆದ ಜೋಡಿಯನ್ನು ಉಳ್ಳೂರು ಕಂದಾವರ ಗಣೇಶ್ ಮುನ್ನಡೆಸಿದರು.

ರಾತ್ರಿ 11 ಗಂಟೆಯವರೆಗೂ ನಡೆದ ಕಂಬಳ ಕೂಟದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಕರಾವಳಿಯ ಜಾನಪದ ಕ್ರೀಡೆಯ ರೋಮಾಂಚನವನ್ನು ಆಸ್ವಾದಿಸಿದರು. ಕೋಣಗಳ ಮಾಲೀಕರು, ಓಟಗಾರರು ಮತ್ತು ಕ್ರೀಡಾಭಿಮಾನಿಗಳ ಉತ್ಸಾಹ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಕರಾವಳಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮೈಸೂರಿನ ದಸರಾ ವೇದಿಕೆಗೆ ತರುವ ಮೂಲಕ ಈ ಕಂಬಳ ಕೂಟ ರಾಜ್ಯದ ವಿವಿಧ ಭಾಗಗಳ ಜನರನ್ನು ಸಾಂಸ್ಕೃತಿಕವಾಗಿ ಬೆಸೆಯುವ ವಿಶೇಷ ಪ್ರಯತ್ನವಾಗಿ ಗಮನ ಸೆಳೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button