*ಆಯುಧ ಪೂಜೆಯ ಸಂಭ್ರಮದಲ್ಲಿ ದುರಂತ*: *ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಆಯುಧ ಪೂಜೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಕ್ಷಣಾರ್ಧದಲ್ಲಿ ಸೂತಕದ ಛಾಯೆ ಆವರಿಸಿದೆ. ವಾಹನಗಳಿಗೆ ಪೂಜೆ ಸಲ್ಲಿಸಿದ ಬಳಿಕ ಕಾರನ್ನು ಬೇರೆಡೆಗೆ ಸ್ಥಳಾಂತರಿಸುವಾಗ ಮೂರು ವರ್ಷದ ಬಾಲಕ ಕಾರಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಪುಟ್ಟ ಕಂದನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಯರಗನಹಳ್ಳಿ ಗ್ರಾಮದ ಸಂಪತ್ ಕುಮಾರ್ ಪುತ್ರ ಕಂದನ್ ಎಸ್. ಗೌಡ (3) ಮೃತಪಟ್ಟ ಬಾಲಕ. ಆಯುಧ ಪೂಜೆಯ ಹಿನ್ನೆಲೆಯಲ್ಲಿ ಮನೆಯಲ್ಲಿ ಕಾರು ಸೇರಿದಂತೆ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಪೂಜೆ ಮುಗಿದ ಬಳಿಕ ಸಂಪತ್ ಕುಮಾರ್ ಬಾಮೈದ ಸಂಜಯ್ ಕಾರನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದಾಗ ಬಾಲಕ ಚಕ್ರಕ್ಕೆ ಸಿಲುಕಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ವೇಳೆ ಕಾರಿನ ಎಡಭಾಗದಿಂದ ಬಾಲಕ ಕಂದನ್ ವಾಹನ ಹತ್ತಲು ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಕಾರಿನ ಸಮೀಪ ಮಗು ಇರುವುದನ್ನು ಗಮನಿಸದ ಸಂಜಯ್ ವಾಹನ ಚಲಾಯಿಸಿದ್ದಾರೆ. ಪರಿಣಾಮ, ಬಾಲಕ ಕಾರಿನ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ಕುಟುಂಬಸ್ಥರು ಬಾಲಕನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಕಂದನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಆಯುಧ ಪೂಜೆಯ ಸಂಭ್ರಮದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ ಸಂತಸದಲ್ಲಿದ್ದ ಕುಟುಂಬಕ್ಕೆ ಮಗುವಿನ ಸಾವು ಬರಸಿಡಿಲಿನಂತೆ ಎರಗಿದೆ. ಮನೆಯ ಪುಟ್ಟ ಕಂದನನ್ನು ಕಳೆದುಕೊಂಡ ಕುಟುಂಬದ ದುಃಖ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




