
ಪ್ರಗತಿವಾಹಿನಿ ಸುದ್ದಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ. ಕೆಳ ಹಂತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಳೆಯ ಕಾಲದ ಮೆಟಲ್ ವಿಸಿಲ್ ಚೈನ್ ಬದಲಾಗಿ ಶೀಘ್ರದಲ್ಲೇ ನೂತನ ವಿಸಿಲ್ ಗಾರ್ಡ್ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.
ಈ ಹಿಂದೆ ರಾಜ್ಯ ಪೊಲೀಸ್ ಸಿಬ್ಬಂದಿ ಧರಿಸುತ್ತಿದ್ದ ಬ್ರಿಟಿಷ್ ಕಾಲದ ಸ್ಲೋಚ್ ಕ್ಯಾಪ್ಗಳು ಬೇಸಿಗೆ ಕಾಲದ ಸಂದರ್ಭದಲ್ಲಿ ಅಸ್ವಸ್ಥತೆ ಉಂಟುಮಾಡುತ್ತಿದ್ದರಿಂದ, ಇತರೆ ರಾಜ್ಯಗಳ ಮಾದರಿಗಳನ್ನು ಪರಿಶೀಲಿಸಿ ನೇವಿ ಬ್ಲೂ ಬಣ್ಣದ ಪೀಕ್ ಕ್ಯಾಪ್ಗಳನ್ನು ನೀಡಲಾಗಿತ್ತು. ಈ ಐತಿಹಾಸಿಕ ಬದಲಾವಣೆಯು ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಹೆಚ್ಚು ಅನುಕೂಲಕರವಾಗಿದೆ. ಅದೇ ಮಾದರಿಯಲ್ಲಿ ಈಗ ಸಮವಸ್ತ್ರದಲ್ಲಿರುವ ಮೆಟಲ್ ವಿಸಿಲ್ ಚೈನ್ ಹಾಗೂ ಮೆಟಲ್ ಬಟನ್ಗಳನ್ನ ಬದಲಾಯಿಸಲು ನಿರ್ಧರಿಸಲಾಗಿದೆ.
ಪ್ರಸ್ತುತ ಬಳಸಲಾಗುತ್ತಿರುವ ಲೋಹದ ಚೈನ್ ಮತ್ತು ಗುಂಡಿಗಳು ಹವಾಮಾನ ವೈಪರೀತ್ಯದಿಂದಾಗಿ ಬೇಗನೆ ತುಕ್ಕು ಹಿಡಿಯುತ್ತಿದ್ದು, ಸಮವಸ್ತ್ರ ಹಾಳಾಗುವುದಲ್ಲದೆ ಸಿಬ್ಬಂದಿಗೆ ಚರ್ಮದ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದವು. ಇದನ್ನು ಗಮನಿಸಿದ್ದ ಸಿಕ್ಕಿಂ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳು ಈಗಾಗಲೇ ಖಾಕಿ ಅಥವಾ ನೀಲಿ ಬಣ್ಣದ ವಿಸಿಲ್ ಗಾರ್ಡ್ ಹಾಗೂ ಪಾಲಿಶ್ಡ್ ಮ್ಯಾಟ್ ಫಿನಿಶ್ ಬಟನ್ಗಳನ್ನು ಸಮವಸ್ತ್ರದಲ್ಲಿ ಅಳವಡಿಸಿಕೊಂಡಿವೆ. ಅಲ್ಲದೆ ಅರಣ್ಯ ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿಗೂ ಈ ಸೌಲಭ್ಯ ನೀಡಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇತರೆ ರಾಜ್ಯಗಳ ಪೊಲೀಸ್ ಸಮವಸ್ತ್ರಗಳ ಭಾವಚಿತ್ರಗಳೊಂದಿಗೆ ಗೃಹ ಇಲಾಖೆ ಹಾಗೂ ಪೊಲೀಸ್ ಡಿಜಿ-ಐಜಿಪಿಯವರಿಗೆ ನಿರಂತರ ಮನವಿ ಸಲ್ಲಿಸಿ ಈ ಕುರಿತು ಒತ್ತಾಯಿಸಲಾಗಿತ್ತು. ಪ್ರಸ್ತುತ ನೇವಿ ಬ್ಲೂ ಪೀಕ್ ಕ್ಯಾಪ್ಗೆ ಹೊಂದುವಂತಹ ವಿಸಿಲ್ ಗಾರ್ಡ್ ಮತ್ತು ಮ್ಯಾಟ್ ಫಿನಿಶ್ ಬಟನ್ಗಳನ್ನು ನೀಡುವಂತೆ ಮನವಿ ಮಾಡಿದ್ದೆವು. ನಮ್ಮ ಮನವಿಯನ್ನ ಪುರಸ್ಕರಿಸಿ, ಸಿಬ್ಬಂದಿಗಳ ಆರೋಗ್ಯ ಹಿತದೃಷ್ಟಿಯಿಂದ ನೂತನ ವಿಸಿಲ್ ಗಾರ್ಡ್ ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




