*ದಸರಾ ಬಳಿಕ ಅರಮನೆ ಅಂಗಳದಲ್ಲಿ ಕಸ ಎತ್ತಿದ ವಸಿಷ್ಠ ಸಿಂಹ*: *ನಟನ ನಡೆಗೆ ವ್ಯಾಪಕ ಮೆಚ್ಚುಗೆ!*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಜಂಬೂಸವಾರಿ ಮುಗಿದ ಬಳಿಕ ಅರಮನೆ ಆವರಣದಲ್ಲಿ ಬಿದ್ದಿದ್ದ ಕಸವನ್ನು ನಟ ವಸಿಷ್ಠ ಸಿಂಹ ಸ್ವತಃ ತೆರವುಗೊಳಿಸುವ ಮೂಲಕ ಸ್ವಚ್ಛತೆಯ ಸಂದೇಶ ನೀಡಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳು ಮತ್ತು ಖಾಲಿ ಪ್ಯಾಕೆಟ್ಗಳನ್ನು ಎತ್ತಿ ಕಸದ ಬುಟ್ಟಿಗೆ ಹಾಕಿದ ನಟನ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯದಶಮಿ ಸಂಭ್ರಮದಲ್ಲಿ ಲಕ್ಷಾಂತರ ಜನರು ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅರಮನೆ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ-ತಿನಿಸುಗಳ ಖಾಲಿ ಪ್ಯಾಕೆಟ್ಗಳು ಸೇರಿದಂತೆ ಸಾಕಷ್ಟು ತ್ಯಾಜ್ಯ ಹರಡಿಕೊಂಡಿತ್ತು. ಐತಿಹಾಸಿಕ ಸ್ಮಾರಕದ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸ ಕಂಡು ಹಲವರು ಬೇಸರ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ನಟ ವಸಿಷ್ಠ ಸಿಂಹ, ಕೇವಲ ಸ್ವಚ್ಛತೆಯ ಬಗ್ಗೆ ಮಾತನಾಡುವುದಕ್ಕಿಂತ ಸ್ವತಃ ಕಾರ್ಯಪ್ರವೃತ್ತರಾಗುವುದೇ ಉತ್ತಮ ಎಂಬಂತೆ ಕಸ ಎತ್ತಲು ಮುಂದಾದರು. ಅರಮನೆ ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಖಾಲಿ ನೀರಿನ ಬಾಟಲಿಗಳನ್ನು ಎತ್ತಿ ಕಸದ ಬುಟ್ಟಿಗೆ ಹಾಕಿದರು. ನಟನ ಈ ಸರಳ ನಡೆ ಸ್ಥಳದಲ್ಲಿದ್ದ ಪ್ರವಾಸಿಗರ ಗಮನ ಸೆಳೆಯಿತು.
ವಸಿಷ್ಠ ಸಿಂಹ ಕಸ ತೆರವುಗೊಳಿಸುತ್ತಿರುವುದನ್ನು ಕಂಡ ಕೆಲ ಸಾರ್ವಜನಿಕರು ಕೂಡ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ಐತಿಹಾಸಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸರ್ಕಾರ ಅಥವಾ ಪೌರಕಾರ್ಮಿಕರ ಜವಾಬ್ದಾರಿ ಮಾತ್ರವಲ್ಲ, ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರ ಕರ್ತವ್ಯವೂ ಹೌದು ಎಂಬ ಸಂದೇಶವನ್ನು ನಟನ ನಡೆ ಸಾರಿದೆ.
ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ವಸಿಷ್ಠ ಸಿಂಹ, ನೈಜ ಜೀವನದಲ್ಲೂ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಪ್ರವಾಸಿ ತಾಣಗಳಲ್ಲಿ ಕಸ ಎಸೆಯುವುದನ್ನು ತಪ್ಪಿಸಿ, ಪರಿಸರದ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂಬ ಚರ್ಚೆಗೂ ಈ ಘಟನೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




