Belagavi NewsBelgaum NewsKannada NewsNational

*ಮಂಗಳವಾರ ಕರ್ನಾಟಕ ಬಂದ್?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಅಕ್ಟೋಬರ್ 26ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ಸಭೆ ನಡೆಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಸಕ್ಕರೆ ಕಾರ್ಖಾನೆ ಮಾಲಿಕರ ಸಭೆ ಹಾಗೂ ಮಧ್ಯಾಹ್ನ 3.30ಕ್ಕೆ ಕಬ್ಬು ಬೆಳೆಗಾರರ ಸಭೆ ನಡೆಸಲಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಮಹತ್ವದ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದರೆ, ಅಕ್ಟೋಬರ್ 27ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಟನ್‌ಗೆ ₹1,000 ಪ್ರೋತ್ಸಾಹಧನ ಘೋಷಿಸಬೇಕು. ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಟ್ಟಿ ನಿರ್ಧಾರ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದಲ್ಲದೆ, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ನಡೆಯುತ್ತಿರುವ ಮೋಸವನ್ನು ತಡೆಗಟ್ಟಲು ₹500 ಕೋಟಿ ಅನುದಾನ ಮೀಸಲಿಡಬೇಕು. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರವೂ ಈ ವಿಚಾರದಲ್ಲಿ ಜವಾಬ್ದಾರಿ ವಹಿಸಬೇಕು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಕಬ್ಬಿನ ಬೆಲೆ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಬೇಕು. ಅಲ್ಲದೆ, ಸಕ್ಕರೆಯನ್ನು ಪ್ರತಿ ಕೆ.ಜಿ.ಗೆ ₹50 ದರದಲ್ಲಿ ಮಾರಾಟ ಮಾಡುವಂತೆ ಕಾರ್ಖಾನೆಗಳಿಗೆ ಸೂಚನೆ ನೀಡಬೇಕು ಎಂದು ಚೂನಪ್ಪ ಪೂಜಾರಿ ಆಗ್ರಹಿಸಿದ್ದಾರೆ.

ಅ.26ರ ಸಭೆಯತ್ತ ರೈತರ ಚಿತ್ತ

ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಅಕ್ಟೋಬರ್ 26ರಂದು ನಡೆಯಲಿರುವ ಮುಖ್ಯಮಂತ್ರಿ ಅವರ ಸಭೆಯ ಮೇಲೆ ರೈತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಭೆಯಲ್ಲಿ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ಅಕ್ಟೋಬರ್ 27ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button