*SBI ಎಟಿಎಂಗೆ ಗ್ಯಾಸ್ ಕಟರ್ ಬಳಸಿ 23 ಲಕ್ಷ ಲೂಟಿ*: *ಮುಖಕ್ಕೆ ಮಾಸ್ಕ್ ಹಾಕಿ ಕೃತ್ಯ, ಸಿಸಿಟಿವಿಗೆ ಸ್ಪ್ರೇ ಹೊಡೆದ ಖದೀಮರ ಕೈಚಳಕ ಸೆರೆ!*

ಪ್ರಗತಿವಾಹಿನಿ ಸುದ್ದಿ: ಕಳ್ಳರು ಎಸ್‌ಬಿಐ ಎಟಿಎಂ ಯಂತ್ರವನ್ನೇ ಕತ್ತರಿಸಿ ಬರೋಬ್ಬರಿ ₹23 ಲಕ್ಷ ಹಣ ದೋಚಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾರಿನಲ್ಲಿ ಬಂದಿದ್ದ ಖದೀಮರು, ಸಿಸಿಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆದು ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಕತ್ತರಿಸಿ ಹಣ ಲೂಟಿ ಮಾಡಿದ್ದಾರೆ. ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಎಟಿಎಂನಲ್ಲಿ ಶನಿವಾರ ತಡರಾತ್ರಿ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದಿದ್ದ ಕಳ್ಳರು ಮೊದಲು ಸಿಸಿಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆದಿದ್ದಾರೆ. ಬಳಿಕ ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರವನ್ನು ಕತ್ತರಿಸಿ ಒಳಗಿದ್ದ ಹಣ ದೋಚಿ ಪರಾರಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ನಗರದ ಚನ್ನಬಸವಾಶ್ರಮ ಮಳಿಗೆಯಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ನಡೆದಿದೆ.
ಹಣ ದೋಚುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗದಂತೆ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆಯಲಾಗಿತ್ತು. ಆದರೂ ಕಳ್ಳರ ಚಲನವಲನಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದೃಶ್ಯಗಳ ಆಧಾರದಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಕಳೆದ ವರ್ಷ ಬೀದರ್‌ನಲ್ಲಿ ಎಟಿಎಂನಿಂದ ₹83 ಲಕ್ಷ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು 19 ತಿಂಗಳ ಬಳಿಕ ಇತ್ತೀಚೆಗೆ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಭಾಲ್ಕಿಯಲ್ಲಿ ಮತ್ತೊಂದು ಎಟಿಎಂ ದರೋಡೆ ನಡೆದಿರುವುದು ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



