Belagavi NewsBelgaum NewsKannada NewsKarnataka News

*ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರ ಅಹೋರಾತ್ರಿ ಹೋರಾಟ ತೀವ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.

ಮುಧೋಳ–ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಎರಡನೇ ಬಾರಿಗೆ ಬೃಹತ್ ಪ್ರತಿಭಟನೆ ನಡೆಸಿದ ರೈತರು, ಬೇಡಿಕೆ ಈಡೇರುವವರೆಗೆ ಅಹೋರಾತ್ರಿ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಯಲು ತಗುಲುತ್ತಿರುವ ವೆಚ್ಚಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಬೇಕು. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಎಂದು ಒತ್ತಾಯಿಸಿದರು.

ನ. 26ರ ಗಡುವು: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ

ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ಮಾತನಾಡಿ, ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ ₹1,000 ಪ್ರೋತ್ಸಾಹಧನ ನೀಡಬೇಕು. ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (ಎಂಎಸ್‌ಪಿ) ಪ್ರತಿ ಕೆ.ಜಿ.ಗೆ ಈಗಿರುವ ₹31ರಿಂದ ₹60ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಸಕ್ಕರೆಯ ಎಂಎಸ್‌ಪಿ ಹೆಚ್ಚಳದಿಂದ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಅನುಕೂಲವಾಗಲಿದ್ದು, ರೈತರಿಗೆ ಪ್ರತಿ ಟನ್ ಕಬ್ಬಿಗೆ ₹5,500ರಿಂದ ₹6,000ರವರೆಗೆ ಬೆಲೆ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಈಗಾಗಲೇ ಹತ್ತರಗಿಯಿಂದ ಹುಬ್ಬಳ್ಳಿವರೆಗೆ ಪಾದಯಾತ್ರೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ನವೆಂಬರ್ 26ರೊಳಗೆ ಸಕ್ಕರೆಯ ಎಂಎಸ್‌ಪಿ ಹೆಚ್ಚಳದ ಕುರಿತು ನಿರ್ಧಾರ ಕೈಗೊಳ್ಳದಿದ್ದರೆ, ನವೆಂಬರ್ 27ರಿಂದ ಹುಬ್ಬಳ್ಳಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ರೈತರನ್ನು ಒಗ್ಗೂಡಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸರ್ಕಾರದ ಸಭೆಯ ನಿರ್ಧಾರಕ್ಕೆ ರೈತರ ಚಿತ್ತ

ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ಅಕ್ಟೋಬರ್ 26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಭೆ ನಡೆಯಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯದ 31 ಜಿಲ್ಲೆಗಳ ಆಯ್ದ ರೈತ ಮುಖಂಡರು ಭಾಗವಹಿಸಲಿದ್ದು, ಕಬ್ಬಿನ ಬೆಲೆ ನಿಗದಿ, ಟನ್‌ಗೆ ₹1,000 ಪ್ರೋತ್ಸಾಹಧನ ಹಾಗೂ ಸಕ್ಕರೆಯ ಎಂಎಸ್‌ಪಿ ಹೆಚ್ಚಳದ ಬೇಡಿಕೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ, ಸೋಮವಾರ ಸಂಜೆ ಗುರ್ಲಾಪುರ ಕ್ರಾಸ್‌ನ ಹೋರಾಟದ ವೇದಿಕೆಯಲ್ಲಿ ಚರ್ಚಿಸಿ ನವೆಂಬರ್ 27ರಂದು ಕರ್ನಾಟಕ ಬಂದ್‌ಗೆ ಕರೆ ನೀಡುವ ಕುರಿತು ತೀರ್ಮಾನಿಸಲಾಗುವುದು ಎಂದು ಎಚ್ಚರಿಸಿದರು.

ರೈತರ ಹೋರಾಟ ಪಕ್ಷಾತೀತವಾಗಿದ್ದು, ರೈತರ ಹಿತಕ್ಕಾಗಿ ಬೆಂಬಲ ನೀಡಲು ಆಗಮಿಸುವ ವಿವಿಧ ಪಕ್ಷಗಳ ಹಾಲಿ ಹಾಗೂ ಮಾಜಿ ಶಾಸಕರು, ಸಚಿವರು ಮತ್ತು ಮುಖಂಡರನ್ನು ಸ್ವಾಗತಿಸಲಾಗುವುದು ಎಂದರು.

ಹೋರಾಟದ ವೇದಿಕೆಯಲ್ಲಿ ಗೌರಮ್ಮನಿಗೆ ಪೂಜೆ

ಕಬ್ಬು ಬೆಳೆಗಾರರ ಹೋರಾಟಕ್ಕೆ ಮಹಿಳೆಯರೂ ಕೈಜೋಡಿಸಿದ್ದು, ಸೀಗಿ ಹುಣ್ಣಿಮೆ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲೇ ಗೌರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ರೈತರಿಗೆ ಕಬ್ಬಿಗೆ ನ್ಯಾಯಯುತ ಬೆಲೆ ದೊರೆಯಲಿ, ಕೃಷಿ ಕ್ಷೇತ್ರದಲ್ಲಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ಕಬ್ಬು ಬೆಳೆಯಲು ರೈತರು ಹೆಚ್ಚಿನ ಬಂಡವಾಳ, ಶ್ರಮ ಮತ್ತು ಸಮಯ ವ್ಯಯಿಸುತ್ತಿದ್ದು, ಅವರ ಉತ್ಪನ್ನಕ್ಕೆ ಸೂಕ್ತ ಬೆಲೆ ನೀಡುವುದು ಅಗತ್ಯ ಎಂದು ಮಹಿಳೆಯರು ಅಭಿಪ್ರಾಯಪಟ್ಟರು. ಹಬ್ಬದ ಸಂದರ್ಭದಲ್ಲಿಯೂ ಹೋರಾಟದ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದು, ಪ್ರತಿಭಟನಾಕಾರರಲ್ಲಿ ಹೊಸ ಉತ್ಸಾಹ ಮೂಡಿಸಿತು.

15 ಟನ್ ಕಬ್ಬು ತಂದು ಕಬ್ಬಿನ ಹಾಲು ವಿತರಣೆ

ಹೋರಾಟದಲ್ಲಿ ಪಾಲ್ಗೊಂಡ ರೈತರಿಗೆ ನೀಲಜಿ ಗ್ರಾಮದ ರೈತರು ವಿಶೇಷ ನೆರವು ನೀಡಿದರು. ರಾಯಬಾಗ ತಾಲೂಕಿನ ನೀಲಜಿ ಗ್ರಾಮದ ರೈತರು ಸುಮಾರು 15 ಟನ್ ಕಬ್ಬು ಹಾಗೂ ಕಬ್ಬಿನ ಹಾಲು ತಯಾರಿಸುವ ಯಂತ್ರವನ್ನು ಪ್ರತಿಭಟನಾ ಸ್ಥಳಕ್ಕೆ ತಂದು, ರೈತರಿಗೆ ಕಬ್ಬಿನ ಹಾಲು ವಿತರಿಸಿದರು. ಬಿಸಿಲಿನ ನಡುವೆಯೂ ಹೋರಾಟದಲ್ಲಿ ಭಾಗವಹಿಸಿದ್ದವರಿಗೆ ಈ ವ್ಯವಸ್ಥೆ ಅನುಕೂಲವಾಯಿತು.

ಆಹಾರ ಸಾಮಗ್ರಿ ನೀಡಿ ಹೋರಾಟಕ್ಕೆ ಸಾಥ್

ಗುರ್ಲಾಪುರ ಕ್ರಾಸ್‌ನಲ್ಲಿ ಅಹೋರಾತ್ರಿ ಹೋರಾಟ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳು ಹಾಗೂ ತಾಲೂಕುಗಳ ಜನರು ಆಹಾರ ಸಾಮಗ್ರಿಗಳನ್ನು ತಂದು ನೆರವು ನೀಡಿದರು. ಬಂಡಿಗಿನಿ ಭಕ್ತರು ಸೇರಿದಂತೆ ಹಲವರು ಹೋಳಿಗೆ, ರೊಟ್ಟಿ, ಅಂಬಲಿ, ಉಂಡಿ, ಅಕ್ಕಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಒದಗಿಸಿದರು.

ರೈತರ ಹೋರಾಟಕ್ಕೆ ಮಹಿಳೆಯರು, ರೈತ ಸಂಘಟನೆಗಳು ಹಾಗೂ ವಿವಿಧ ಗ್ರಾಮಗಳ ಜನರು ಒಗ್ಗಟ್ಟಿನ ಬೆಂಬಲ ವ್ಯಕ್ತಪಡಿಸಿದ್ದು, ಕಬ್ಬಿನ ಬೆಲೆ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವ ಸಂಕಲ್ಪವನ್ನು ರೈತ ಮುಖಂಡರು ಪುನರುಚ್ಚರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button