*ಶೀಘ್ರದಲ್ಲೇ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹೆಸರು ಬದಲಾವಣೆ*: *ಹೊಸ ಹೆಸರು ಘೋಷಿಸಿದ ಸಿಎಂ *

ಪ್ರಗತಿವಾಹಿನಿ ಸುದ್ದಿ: ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಿದ್ದು, ಕಿತ್ತೂರು ಕೋಟೆಯ ಮರುಸೃಷ್ಟಿಗೆ ಮುಂದಿನ ಬಜೆಟ್‌ನಲ್ಲಿ ₹40 ಕೋಟಿ ಮೀಸಲಿಡುವುದಾಗಿ ಭರವಸೆ ನೀಡಿದ್ದಾರೆ. ದ್ವೇಷದಿಂದಲ್ಲ, ಪ್ರೀತಿಯಿಂದ ಜನಸೇವೆ ಮಾಡಲು ಸಾಧ್ಯ ಎಂದು ಇದೇ ವೇಳೆ ಸಿಎಂ ತಿಳಿಸಿದ್ದಾರೆ.
ಕಿತ್ತೂರು ಕೋಟೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕೋಟೆಯ ಮರುಸೃಷ್ಟಿಗೆ ಅನುದಾನ ನೀಡುವಂತೆ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಮುಂದಿನ ಬಜೆಟ್‌ನಲ್ಲಿ ₹40 ಕೋಟಿ ಮೀಸಲಿಡುತ್ತೇನೆ. ಈ ಸಂಬಂಧ ಈಗಲೇ ಆದೇಶ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇತಿಹಾಸವನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಹೇಳಿದ್ದಾರೆ.
ಈ ಭಾಗದ ವೃಷಭೇಂದ್ರ ಏತ ನೀರಾವರಿ ಯೋಜನೆಗೆ ₹500 ಕೋಟಿ ಮೀಸಲಿಡುವುದಾಗಿಯೂ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಇತಿಹಾಸ ಮತ್ತು ಪರಂಪರೆಯನ್ನು ಉಳಿಸುವುದರ ಜೊತೆಗೆ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆಗೂಡಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದನ್ನು ಅವರು ಸ್ಮರಿಸಿದ್ದಾರೆ. ಚಿಕ್ಕೋಡಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆಯ ಯಜಮಾನಿಯರಿಗೆ ತಿಂಗಳಿಗೆ ₹2,000 ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಈ ಯೋಜನೆ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಶಕ್ತಿ ಮತ್ತು ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಶಾಸಕರು ಜನರ ಬಳಿಗೆ ತೆರಳಿ ಜನಸೇವೆಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ದ್ವೇಷದಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಜನರ ಪ್ರೀತಿ ಮತ್ತು ವಿಶ್ವಾಸದಿಂದ ಮಾತ್ರ ಸೇವೆ ಮಾಡಲು ಸಾಧ್ಯ. ಈ ಸರ್ಕಾರ ಸದಾ ಜನರ ಜೊತೆ ನಿಲ್ಲುತ್ತದೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ರಾಮಾಯಣದ ಕುರಿತು ಮಾತನಾಡಿದ ಅವರು, ರಾಮನ ಪಾತ್ರಕ್ಕಿಂತ ಸೀತೆಯ ಪಾತ್ರ ದೊಡ್ಡದು ಎಂದು ತಮಗೆ ಅನಿಸುತ್ತದೆ. ಸೀತೆಯ ತ್ಯಾಗ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವೇದಿಕೆಯಲ್ಲಿದ್ದ ಮಠಾಧೀಶರ ಆಶೀರ್ವಾದ ಸರ್ಕಾರದ ಮೇಲೆ ಇರಲಿ ಎಂದು ಮನವಿ ಮಾಡಿದ್ದಾರೆ.
ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಮಾತನಾಡಿ, ಕಿತ್ತೂರು ಕೋಟೆ ಆವರಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ. ಕೋಟೆಯ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ರಾಣಿ ಚೆನ್ನಮ್ಮನ ಇತಿಹಾಸ ಸಾರುವ ಫ್ರೀಡಂ ಪಾರ್ಕ್ ನಿರ್ಮಿಸಬೇಕು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಮಠಾಧೀಶರು ವೇದಿಕೆಯಲ್ಲೇ ಮನವಿ ಮಾಡಿದ್ದಾರೆ. ನಿಜಗುಣ ತೋಂಟದಾರ್ಯ ಮಹಾಸ್ವಾಮೀಜಿ ಮತ್ತು ಬೈಲೂರು ಮಠದ ಶ್ರೀಗಳು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಕಬ್ಬು ಬೆಳೆಗಾರರ ಜೊತೆ ಮರುದಿನ ಸಭೆ ನಡೆಸಲಿರುವುದಾಗಿ ತಿಳಿಸಲಾಗಿದ್ದು, ರೈತರ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಮೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



