*ಟೈರ್ ಬ್ಲಾಸ್ಟ್ ಆಗಿ ಸೇತುವೆಯಿಂದ ಕೆಳಗೆ ಬಿದ್ದ ಕಾರು*: *ನಾಲ್ವರು ಸಜೀವ ದಹನ!*

ಪ್ರಗತಿವಾಹಿನಿ ಸುದ್ದಿ: ದೇವರ ದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದ ಐವರು ಆಪ್ತ ಸ್ನೇಹಿತರ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದ ವಾಹನ ಸೇತುವೆಯಿಂದ ಕೆಳಗೆ ಬಿದ್ದು ಬೆಂಕಿಗೆ ಆಹುತಿಯಾಗಿದೆ. ಕಾರಿನೊಳಗೆ ಸಿಲುಕಿದ ನಾಲ್ವರು ಯುವಕರು ಮೃತಪಟ್ಟಿದ್ದು, ಹೊರಗೆ ಬಿದ್ದಿದ್ದ ಮತ್ತೊಬ್ಬ ಯುವಕ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಾವರಿಯಾ ಸೇಠ್ ದೇವಾಲಯದಲ್ಲಿ ದರ್ಶನ ಪಡೆದು ಸ್ವಿಫ್ಟ್ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಸಾಂಗೋರ್ ಗ್ರಾಮದ ಐವರು ಸ್ನೇಹಿತರು ಭಾನುವಾರ ತಡರಾತ್ರಿ ಪ್ರಯಾಣಿಸುತ್ತಿದ್ದರು. ಸೇತುವೆ ದಾಟುವ ವೇಳೆ ಚಾಲಕನ ಬದಿಯ ಮುಂಭಾಗದ ಟೈರ್ ದಿಢೀರನೆ ಸ್ಫೋಟಗೊಂಡಿದೆ. ಇದರಿಂದ ನಿಯಂತ್ರಣ ತಪ್ಪಿದ ಕಾರು ಸೇತುವೆಯ ತಗ್ಗಿಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಈ ದಾರುಣ ಅಪಘಾತ ಮಧ್ಯಪ್ರದೇಶದ ಧಾರ ಜಿಲ್ಲೆಯ ಸಾದಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲೇಬಡ್-ನಾಯಗಾಂವ್ ಹಾಗೂ ಮೌ-ನೀಮಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀರಾ ಧಾಬಾ ಮತ್ತು ಸಂಗೇಶರ ಸಮೀಪ ಭಾನುವಾರ ರಾತ್ರಿ ಸುಮಾರು 11.14ರಿಂದ 11.30ರ ನಡುವೆ ಸಂಭವಿಸಿದೆ.
ಅಪಘಾತದ ವೇಳೆ ಕಾರಿನಲ್ಲಿದ್ದ ಯುವಕರು ನಿದ್ರೆಯಲ್ಲಿದ್ದರು ಎನ್ನಲಾಗಿದೆ. ಕಾರು ಸೇತುವೆಗೆ ಡಿಕ್ಕಿ ಹೊಡೆದು ತಗ್ಗಿಗೆ ಬಿದ್ದ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದರಿಂದ ಒಳಗಿದ್ದವರಿಗೆ ಹೊರಬರಲು ಸಾಧ್ಯವಾಗಲಿಲ್ಲ.
ಘಟನೆಯಲ್ಲಿ ನಾಲ್ವರು ಯುವಕರು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮೃತರನ್ನು ಭೀಮ್ ಢಾಕಡ್ (24), ಆದಿತ್ಯ ತಿವಾರಿ (22), ಚೇತನ್ ಢಾಕಡ್ (21) ಮತ್ತು ಅಭಿಷೇಕ್ ಸೋಲಂಕಿ (19) ಎಂದು ಗುರುತಿಸಲಾಗಿದೆ. ನಾಲ್ವರೂ ಸಾಂಗೋರ್ ಗ್ರಾಮದ ನಿವಾಸಿಗಳಾಗಿದ್ದಾರೆ.
ಇದೇ ಕಾರಿನಲ್ಲಿದ್ದ ತುಷಾರ್ ಮುಖೇಶ್ ಮಂಡ್ಲೋಯಿ (20) ಅಪಘಾತದ ರಭಸಕ್ಕೆ ಕಾರಿನಿಂದ ಹೊರಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಆತನ ದೇಹದ ಶೇ.35ರಿಂದ 40ರಷ್ಟು ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಧಾರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ಗೆ ಕರೆದೊಯ್ಯಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರೂ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಕಾರಿನೊಳಗಿದ್ದ ನಾಲ್ವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಧಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಧಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಾರುಲ್ ಬೇಲಾಪುರ್ಕರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಅವರ ನಿರ್ದೇಶನದಂತೆ ಸಾದಲ್‌ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




