*ಸಿಎಂ ಸಭೆಗೂ ಮುನ್ನವೇ ರೈತರ ಆಕ್ರೋಶ*: *ಹೆದ್ದಾರಿ ತಡೆದು ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಗೂ ಮುನ್ನವೇ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು, ಹಲಗಾ ಗ್ರಾಮದ ಬಳಿಯ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸಬೇಕು, ಪ್ರತಿ ಟನ್ ಕಬ್ಬಿಗೆ ₹1,000 ಪರಿಹಾರ ನೀಡಬೇಕು ಹಾಗೂ ಕಬ್ಬಿನ ತೂಕದಲ್ಲಿ ನಡೆಯುತ್ತಿರುವ ಮೋಸವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.
ಇದೇ ವೇಳೆ, ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಎಲ್ಲಾ ರೈತ ಮುಖಂಡರಿಗೂ ಭಾಗವಹಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಪಾಸ್ ಹೊಂದಿರುವವರಿಗೆ ಮಾತ್ರ ಒಳ ಪ್ರವೇಶಕ್ಕೆ ಅವಕಾಶ ನೀಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಮಂಡಿಸಲು ಅವಕಾಶ ಕಲ್ಪಿಸಬೇಕು ಎಂದು ಪಟ್ಟು ಹಿಡಿದರು.
ಒಂದೆಡೆ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಯುತ್ತಿದ್ದರೆ, ಮತ್ತೊಂದೆಡೆ ಹೊರಗೆ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳಿಗೆ ಸ್ಪಷ್ಟ ಭರವಸೆ ಸಿಗುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




