Kannada NewsKarnataka NewsLatestPolitics

*ಮುಸ್ಲಿಮರು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಗಳು ಬೇರೆ ಬೇರೆಯಲ್ಲ*: *ಸಚಿವ ರಿಜ್ವಾನ್ ಅರ್ಷದ್*

ಪ್ರಗತಿವಾಹಿನಿ ಸುದ್ದಿ: ಇಂದಿನ ಬಹುತೇಕ ಮುಸ್ಲಿಮರು ಹಿಂದಿನ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸೇರಿದವರು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದಲಿತ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಾಮಾಜಿಕ ಬಾಂಧವ್ಯದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಲಿತ ಕೇರಿಗಳು ಇರುವ ಪ್ರದೇಶಗಳಲ್ಲೇ ಮುಸ್ಲಿಮರೂ ವಾಸಿಸುತ್ತಾರೆ. ಹಿಂದಿನ ಕಾಲದಲ್ಲಿ ಪೂರ್ವಜರು ಯಾವ ಕಾರಣಕ್ಕೆ ಮತಾಂತರಗೊಂಡರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಧರ್ಮ ಬದಲಾದ ಮಾತ್ರಕ್ಕೆ ದೇಹದಲ್ಲಿ ಹರಿಯುವ ರಕ್ತ ಬದಲಾಗುವುದಿಲ್ಲ. ಹೀಗಾಗಿ ನಾವೆಲ್ಲರೂ ಒಂದೇ ಸಮುದಾಯದವರು, ನಮ್ಮ ನಡುವೆ ಭೇದಭಾವ ಇರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಸ್ಲಿಮರನ್ನು ಮಾಜಿ ದಲಿತರು ಎಂದು ಪರಿಗಣಿಸಬೇಕು ಎಂಬ ರೀತಿಯಲ್ಲಿಯೂ ಸಚಿವರು ತಮ್ಮ ಮಾತನ್ನು ಮಂಡಿಸಿದ್ದಾರೆ. ಧರ್ಮದ ಆಧಾರದಲ್ಲಿ ಜನರನ್ನು ಪ್ರತ್ಯೇಕಿಸುವುದಕ್ಕಿಂತ ಸಾಮಾಜಿಕ ಬಾಂಧವ್ಯ ಮತ್ತು ಪರಸ್ಪರ ಸಹಕಾರಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.

ದಲಿತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಹಲವು ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಮುಸ್ಲಿಂ ಸಮುದಾಯವೂ ಎದುರಿಸುತ್ತಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಎರಡೂ ಸಮುದಾಯಗಳ ಜನರು ಸಂಕಷ್ಟಗಳನ್ನು ಎದುರಿಸುತ್ತಿರುವುದರಿಂದ ಪರಸ್ಪರ ಬೆಂಬಲವಾಗಿ ನಿಲ್ಲುವುದು ಅಗತ್ಯ ಎಂದು ತಿಳಿಸಿದ್ದಾರೆ.

ದಲಿತ ಸಮುದಾಯದ ಪೂಜ್ಯ ಸ್ವಾಮೀಜಿಗಳು ಮುಸ್ಲಿಂ ಸಮುದಾಯದ ಸಮಸ್ಯೆಗಳಿಗೂ ಧ್ವನಿಯಾಗಬೇಕು ಎಂದು ವೇದಿಕೆಯಲ್ಲೇ ಮನವಿ ಮಾಡಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪರಸ್ಪರ ಸಹಕಾರದ ಮೂಲಕ ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button