*ಜೈನ ಅಭಿವೃದ್ಧಿ ನಿಗಮಕ್ಕೆ 10 ದಿನಗಳ ಗಡುವು*: *ಸುವರ್ಣಸೌಧದ ಮುಂದೆ ಸಲ್ಲೇಖನ ವ್ರತದ ಎಚ್ಚರಿಕೆ!*

ಪ್ರಗತಿವಾಹಿನಿ ಸುದ್ದಿ: ಜೈನ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೈನ ಸಮುದಾಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಮುಂದಿನ 10 ದಿನಗಳೊಳಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸದಿದ್ದರೆ ಬೆಳಗಾವಿಯ ಸುವರ್ಣಸೌಧದ ಎದುರು ಅನ್ನ, ನೀರು ತ್ಯಜಿಸಿ ‘ಸಲ್ಲೇಖನ ವ್ರತ’ ಕೈಗೊಳ್ಳುವುದಾಗಿ ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥದ ಜೈನಮುನಿ ಶ್ರೀ ಗುಣಧರನಂದಿ ಮಹಾರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿರುವ ಜೈನಮುನಿ, ವರೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೋರಾಟದ ರೂಪುರೇಷೆಗಳನ್ನು ಪ್ರಕಟಿಸಿದ್ದಾರೆ. ಜೈನ ಸಮುದಾಯದ ಹಕ್ಕುಗಳು ಮತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸಣ್ಣ ಸಮುದಾಯಗಳು ಹಾಗೂ ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಆದರೆ ಸುಮಾರು 20 ಲಕ್ಷ ಮತದಾರರನ್ನು ಹೊಂದಿರುವ ಜೈನ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಶ್ರೀ ಗುಣಧರನಂದಿ ಮಹಾರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈನ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಇದರ ಜೊತೆಗೆ ಜೈನ ಬಸದಿಗಳು ಮತ್ತು ಜೈನಮುನಿಗಳ ಮೇಲೆ ನಡೆಯುತ್ತಿದೆ ಎನ್ನಲಾದ ದೌರ್ಜನ್ಯ ಹಾಗೂ ಅನ್ಯಾಯವನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೈನಮುನಿಗಳು ಪಾದಯಾತ್ರೆ ನಡೆಸುವ ಸಂದರ್ಭದಲ್ಲಿ ರಾತ್ರಿ ತಂಗಲು ಸರ್ಕಾರಿ ಶಾಲೆಗಳಲ್ಲಿ ಅಧಿಕೃತ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಹೋರಾಟದ ಮೊದಲ ಹಂತದಲ್ಲಿ ಜೈನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳ ಶಾಸಕರನ್ನು ಭೇಟಿಯಾಗಿ, ಸಮುದಾಯದ ಬೇಡಿಕೆಗಳಿಗೆ ಬೆಂಬಲ ನೀಡುವಂತೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಬಳಿಕ ನವೆಂಬರ್ 15ರಿಂದ ಲಕ್ಷಾಂತರ ಜೈನ ಸಮುದಾಯದ ಜನರೊಂದಿಗೆ ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಬೃಹತ್ ಪಾದಯಾತ್ರೆ ನಡೆಸಲು ಯೋಜಿಸಲಾಗಿದೆ.
ಸುವರ್ಣಸೌಧದ ಮುಂದೆ ಅನ್ನ, ನೀರು ತ್ಯಜಿಸಿ ‘ಸಲ್ಲೇಖನ ವ್ರತ’ ಕೈಗೊಳ್ಳುವ ಮೂಲಕ ಪ್ರಾಣತ್ಯಾಗ ಮಾಡುವುದಾಗಿ ಜೈನಮುನಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೈನ ಸಮುದಾಯದ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




