*ಆರದ ಕಬ್ಬಿನ ಕಿಚ್ಚು: ಬೆಳಗಾವಿಯ ವಿವಿಧ ಸಕ್ಕರೆ ಗೋದಾಮುಗಳಿಗೆ ರೈತರ ಮುತ್ತಿಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವುದು ಸೇರಿದಂತೆ ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ಘೋಷಿಸುವಂತೆ ಆಗ್ರಹಿಸಿ ರೈತರ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿದ ರೈತರು, ಬೇಡಿಕೆ ಈಡೇರುವವರೆಗೆ ಸಕ್ಕರೆ ಮಾರಾಟ ಮಾಡದಂತೆ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಒಡೆತನದ ಸತೀಶ್ ಶುಗರ್ಸ್ ಕಾರ್ಖಾನೆಗೆ ರೈತರು ಭೇಟಿ ನೀಡಿ, ಸಕ್ಕರೆ ಗೋದಾಮಿನ ಪರಿಶೀಲನೆ ನಡೆಸಿದರು. ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸುವುದರ ಜೊತೆಗೆ ಕಬ್ಬಿನ ದರ ಘೋಷಣೆಯಾಗುವವರೆಗೆ ಸಕ್ಕರೆ ಹೊರಗೆ ಸಾಗಿಸಬಾರದು ಎಂದು ಕಾರ್ಖಾನೆ ಅಧಿಕಾರಿಗಳಿಗೆ ಮನವಿ ಮಾಡಿದರು. ರೈತರ ಮನವಿಗೆ ಕಾರ್ಖಾನೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸಿದರು.
ಇದೇ ವೇಳೆ, ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಮಾಜಿ ಸಂಸದ ರಮೇಶ್ ಕತ್ತಿ ಒಡೆತನದ ವಿಶ್ವರಾಜ್ ಶುಗರ್ಸ್ ಕಾರ್ಖಾನೆಯ ಸಕ್ಕರೆ ಗೋದಾಮಿಗೂ ರೈತರು ಮುತ್ತಿಗೆ ಹಾಕಿದರು. ಎಂಎಸ್ಪಿ ಜಾರಿಯಾಗುವವರೆಗೆ ಸಕ್ಕರೆ ಮಾರಾಟ ಸ್ಥಗಿತಗೊಳಿಸಬೇಕು ಹಾಗೂ ಕೆ.ಜಿ. ಸಕ್ಕರೆಗೆ ₹60 ದರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸಕ್ಕರೆ ಗೋದಾಮುಗಳಿಗೆ ಬೀಗ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ, ಕಾಗವಾಡ ತಾಲೂಕಿನ ಕೆಂಪವಾಡದಲ್ಲಿರುವ ಮಾಜಿ ಸಚಿವ ಶ್ರೀಮಂತ ಪಾಟೀಲ ಒಡೆತನದ ಅಥಣಿ ಶುಗರ್ಸ್ ಕಾರ್ಖಾನೆಗೂ ರೈತರು ಭೇಟಿ ನೀಡಿದರು. ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದ ಶ್ರೀಮಂತ ಪಾಟೀಲ, ರೈತರ ಬೇಡಿಕೆ ನ್ಯಾಯಯುತವಾಗಿದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರ ಎಂಎಸ್ಪಿ ದರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದ ಅವರು, ರೈತರ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಬ್ಬಿಗೆ ಎಸ್ಎಪಿ (ರಾಜ್ಯ ಸಲಹಾ ಬೆಲೆ) ಹಾಗೂ ಸಕ್ಕರೆಗೆ ಎಂಎಸ್ಪಿ ನಿಗದಿಪಡಿಸುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಬೇಡಿಕೆಗಳು ಈಡೇರುವವರೆಗೆ ಸಕ್ಕರೆ ಮಾರಾಟಕ್ಕೆ ಅವಕಾಶ ನೀಡಬಾರದು ಎಂಬುದು ರೈತರ ಪ್ರಮುಖ ಆಗ್ರಹವಾಗಿದೆ.
ಅಕ್ಟೋಬರ್ 31ರಂದು ದೊಡ್ಡ ಮಟ್ಟದ ಹೋರಾಟ ಆಯೋಜಿಸಲು ರೈತರು ಸಿದ್ಧತೆ ನಡೆಸಿದ್ದು, ಅಷ್ಟರೊಳಗೆ ಕಬ್ಬಿನ ದರ ನಿಗದಿಪಡಿಸಿ, ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಘೋಷಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




