*ಧನ್ವೀರ್ ವಿರುದ್ಧ ಕಾನೂನು ಹೋರಾಟಕ್ಕೆ ದರ್ಶನ್ ಸೂಚನೆ?*: *ವಿಜಯಲಕ್ಷ್ಮಿಗೆ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವಿನ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಧನ್ವೀರ್ ವಿರುದ್ಧ ಈಗಾಗಲೇ ವಿಜಯಲಕ್ಷ್ಮಿ ಹಾಗೂ ಆಪ್ತರು ಹಲವು ದೂರುಗಳನ್ನು ದಾಖಲಿಸಿದ್ದಾರೆ. ಅಕ್ಟೋಬರ್ 27ರಂದು ವಿಜಯಲಕ್ಷ್ಮಿ ಮತ್ತು ನಟ ಝೈದ್ ಖಾನ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ದರ್ಶನ್ ಕಾನೂನು ಹೋರಾಟ ಮುಂದುವರಿಸುವಂತೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ವಿಜಯಲಕ್ಷ್ಮಿ, ಧನ್ವೀರ್ ಹೇಳಿರುವ ಆರೋಪಗಳ ಬಗ್ಗೆ ದರ್ಶನ್ ಬಳಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ‘ನಿಮ್ಮನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ನನಗೆ ಇಷ್ಟವಿಲ್ಲವಂತೆ’ ಎಂದು ವಿಜಯಲಕ್ಷ್ಮಿ ಹೇಳಿದಾಗ, ದರ್ಶನ್ ನಗುತ್ತಾ ‘ಹೌದಾ ಪುಟ್ಟ’ ಎಂದು ಪ್ರತಿಕ್ರಿಯಿಸಿದ್ದಾರೆ ಎಂಬ ಮಾಹಿತಿ ವರದಿಯಲ್ಲಿದೆ.
ಬಳಿಕ ಕಳೆದ ವಾರ ನಡೆದ ಘಟನೆಗಳನ್ನು ವಿಜಯಲಕ್ಷ್ಮಿ ವಿವರಿಸಿದ್ದಾರೆ ಎನ್ನಲಾಗಿದೆ. ಧನ್ವೀರ್ ಮನೆಗೆ ಹಣ ಕೇಳಲು ಹೋಗಿದ್ದು, ಮ್ಯಾನೇಜರ್ ನಾಗರಾಜ್ಗೆ ಬೆದರಿಕೆ ಹಾಕಿದ ಆರೋಪ, ಧನ್ವೀರ್ ತಂದೆ ದಾಖಲಿಸಿರುವ ಪ್ರಕರಣ, ಪರಸ್ಪರ ದೂರುಗಳು ಹಾಗೂ ಮಾಧ್ಯಮಗಳಿಗೆ ಧನ್ವೀರ್ ನೀಡಿರುವ ಹೇಳಿಕೆಗಳ ಬಗ್ಗೆ ದರ್ಶನ್ಗೆ ಮಾಹಿತಿ ನೀಡಿದ್ದಾರೆ. ವಿಜಯಲಕ್ಷ್ಮಿಯನ್ನು ‘ಫೇಕ್’ ಎಂದು ಕರೆದಿರುವ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಎಲ್ಲವನ್ನೂ ಕೇಳಿಸಿಕೊಂಡ ದರ್ಶನ್, ವಿಜಯಲಕ್ಷ್ಮಿಗೆ ಧೈರ್ಯ ತುಂಬಿ ಕಾನೂನು ಹೋರಾಟ ನಡೆಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ‘ಧನ್ವೀರ್ ಇಷ್ಟೆಲ್ಲ ಮಾತನಾಡುತ್ತಿದ್ದಾನೆ ಎಂದರೆ ಆತನ ಹಿಂದೆ ಯಾರಿದ್ದಾರೆ?’ ಎಂದು ದರ್ಶನ್ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಧನ್ವೀರ್ ಏನೇ ಮಾತನಾಡಿದರೂ ನಿಯಮ ಮೀರಿ ನಡೆದುಕೊಳ್ಳಬಾರದು, ಕಾನೂನು ಮಾರ್ಗದಲ್ಲೇ ಹೋರಾಡಬೇಕು. ನಮಗೂ ಒಂದು ಸಮಯ ಬರುತ್ತದೆ, ಆಗ ಮಾತನಾಡೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸುಮಾರು ಒಂದು ಗಂಟೆ ಕಾಲ ದರ್ಶನ್, ವಿಜಯಲಕ್ಷ್ಮಿ ಮತ್ತು ಝೈದ್ ಖಾನ್ ನಡುವೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ. ಧನ್ವೀರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ ದರ್ಶನ್, ವಕೀಲರ ಜೊತೆ ಚರ್ಚಿಸಿ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲಿಸುವ ನಿಟ್ಟಿನಲ್ಲಿ ಮುಂದುವರಿಯುವಂತೆ ವಿಜಯಲಕ್ಷ್ಮಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ದರ್ಶನ್ ವಕೀಲರಿಂದ ಪ್ರಕರಣದ ಮುಂದಿನ ಹಂತಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎಂದು ವರದಿಯಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ಸೇರಿದಂತೆ ಹಲವು ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




