*ಐದು ವರ್ಷ ಕಳೆದರೂ ಮಾಸದ ಅಪ್ಪು ನೆನಪು*: *ಪುನೀತ್ ಪುಣ್ಯಸ್ಮರಣೆಯಲ್ಲಿ ಕರುನಾಡು ಭಾವುಕ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದ ಪ್ರೀತಿಯ ನಟ ಪುನೀತ್ ರಾಜ್ಕುಮಾರ್ ಅವರನ್ನು ಇಡೀ ನಾಡು ಇಂದು ಭಾವುಕವಾಗಿ ಸ್ಮರಿಸುತ್ತಿದೆ. 2021ರ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ಕೊನೆಯುಸಿರೆಳೆದ ಅಪ್ಪು ಅವರನ್ನು ಕನ್ನಡಿಗರು ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಆದರೆ, ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಅಪ್ಪು ಮೇಲಿನ ಪ್ರೀತಿ ಮತ್ತು ಅಭಿಮಾನ ಇಂದಿಗೂ ಕಿಂಚಿತ್ತೂ ಕಡಿಮೆಯಾಗಿಲ್ಲ.
2021ರ ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ಇಡೀ ಕರ್ನಾಟಕವನ್ನು ಆಘಾತಕ್ಕೀಡು ಮಾಡಿತ್ತು. ಬೆಳಿಗ್ಗೆ ಜಿಮ್ನಲ್ಲಿ ವ್ಯಾಯಾಮ ಮುಗಿಸಿದ ಬಳಿಕ ಅತಿಯಾಗಿ ಬೆವರು ಹರಿದ ಹಿನ್ನೆಲೆಯಲ್ಲಿ ಕುಟುಂಬ ವೈದ್ಯರಾದ ಡಾ. ರಮಣ್ ರಾವ್ ಅವರನ್ನು ಸಂಪರ್ಕಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಆಸ್ಪತ್ರೆಯತ್ತ ಸಾಗುವ ಮಾರ್ಗಮಧ್ಯೆ ಅಪ್ಪು ಕೊನೆಯುಸಿರೆಳೆದರು. ಈ ದುರಂತದ ನೆನಪು ಇಂದಿಗೂ ಅಭಿಮಾನಿಗಳ ಮನದಲ್ಲಿ ನೋವು ಮೂಡಿಸುತ್ತದೆ.
ಇಂದು ಬೆಳಗ್ಗೆಯಿಂದಲೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ ಸ್ಮಾರಕಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸ್ಮಾರಕವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸಲಿದ್ದಾರೆ. ಕುಟುಂಬಸ್ಥರು ಕೂಡ ಬೆಳಿಗ್ಗೆ ಸ್ಮಾರಕದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಪುನೀತ್ ರಾಜ್ಕುಮಾರ್ ಕೇವಲ ನಟನಾಗಿ ಮಾತ್ರವಲ್ಲದೆ, ಸಮಾಜಮುಖಿ ಕಾರ್ಯಗಳ ಮೂಲಕವೂ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಶಿಕ್ಷಣ, ಆರೋಗ್ಯ ಮತ್ತು ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ಮಾನವೀಯತೆಗೆ ಮಾದರಿಯಾಗಿದ್ದರು. ಅಪ್ಪು ಅವರ ಸಾಮಾಜಿಕ ಕಳಕಳಿಯಿಂದ ಪ್ರೇರಿತರಾದ ಅಭಿಮಾನಿಗಳು ಇಂದಿಗೂ ವಿವಿಧ ಸೇವಾ ಕಾರ್ಯಗಳ ಮೂಲಕ ಸ್ಮರಣೆ ಸಲ್ಲಿಸುತ್ತಿದ್ದಾರೆ.
ರಾಜ್ಯದ ವಿವಿಧೆಡೆ ಅಭಿಮಾನಿ ಸಂಘಗಳು ಮತ್ತು ಸಂಘಸಂಸ್ಥೆಗಳು ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ, ನೇತ್ರದಾನ ನೋಂದಣಿ, ಅನ್ನಸಂತರ್ಪಣೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ಮತ್ತು ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅಪ್ಪು ಕುರಿತ ನೆನಪುಗಳು, ಚಿತ್ರಗಳು ಮತ್ತು ಸಂದೇಶಗಳು ಹರಿದಾಡುತ್ತಿವೆ. ದೈಹಿಕವಾಗಿ ದೂರವಾದರೂ ಸೇವೆ, ಸರಳತೆ ಮತ್ತು ಮಾನವೀಯತೆಯ ಮೂಲಕ ಪುನೀತ್ ರಾಜ್ಕುಮಾರ್ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


