Film & EntertainmentKannada NewsKarnataka NewsLatest

*‘ಪ್ರೇಮದ ಊರಲಿ’ ಸಿನಿಮಾದ ಎಫೆಕ್ಟ್*: *ಸೀಗೆಗುಡ್ಡಕ್ಕೆ ವಾಹನ ಸಂಚಾರ ಬಂದ್*

ಪ್ರಗತಿವಾಹಿನಿ ಸುದ್ದಿ: ಒಂದೇ ಒಂದು ಸಿನಿಮಾ ಅಜ್ಞಾತ ತಾಣವನ್ನೂ ಪ್ರವಾಸಿ ತಾಣವಾಗಿ ಪರಿವರ್ತಿಸಬಲ್ಲದು ಎಂಬುದಕ್ಕೆ ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಸೀಗೆಗುಡ್ಡ ಮತ್ತು ಐತಿಹಾಸಿಕ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನ ಸಾಕ್ಷಿಯಾಗಿವೆ. ‘ಪ್ರೇಮದ ಊರಲಿ’ ಕನ್ನಡ ಸಿನಿಮಾದ ಪ್ರಮುಖ ದೃಶ್ಯಗಳು ಇಲ್ಲಿ ಚಿತ್ರೀಕರಣಗೊಂಡ ಬಳಿಕ, ಈ ಬೆಟ್ಟದ ನೈಸರ್ಗಿಕ ಸೌಂದರ್ಯ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹೆಚ್ಚುತ್ತಿರುವ ಜನಸಂದಣಿ ಮತ್ತು ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿನಿಮಾ ಬಿಡುಗಡೆಯಾಗುವ ಮೊದಲು ದಿನಕ್ಕೆ ಸರಾಸರಿ 50 ಜನರು ಮಾತ್ರ ಸೀಗೆಗುಡ್ಡ ಮತ್ತು ಮಳೆ ಮಲ್ಲೇಶ್ವರ ಸ್ವಾಮಿ ಸನ್ನಿಧಿಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಆದರೆ, ಸಿನಿಮಾ ಜನಪ್ರಿಯತೆ ಗಳಿಸಿದ ಬಳಿಕ ಪ್ರತಿದಿನ 5,000ಕ್ಕೂ ಹೆಚ್ಚು ಪ್ರವಾಸಿಗರು ಹಾಗೂ ಯುವಜನರು ಇಲ್ಲಿಗೆ ಬರುತ್ತಿದ್ದಾರೆ. ಬೆಟ್ಟದ ಸೌಂದರ್ಯದ ನಡುವೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಸಿನಿಮಾದ ಹಾಡುಗಳಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವುದು ಪ್ರವಾಸಿಗರ ನೆಚ್ಚಿನ ಚಟುವಟಿಕೆಯಾಗಿದೆ.

ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದು ಸ್ಥಳೀಯ ಸಣ್ಣ ವ್ಯಾಪಾರಿಗಳಿಗೆ ಸಂತಸ ತಂದಿದ್ದರೂ, ಕಿರಿದಾದ ಬೆಟ್ಟದ ರಸ್ತೆಯಲ್ಲಿ ವಾಹನಗಳ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ. ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಅಪಘಾತದ ಅಪಾಯವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಸೀಗೆಗುಡ್ಡ ಮತ್ತು ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಗಳಲ್ಲಿ ಖಾಸಗಿ ಹಾಗೂ ಪ್ರವಾಸಿ ವಾಹನಗಳ ಸಂಚಾರಕ್ಕೆ ನವೆಂಬರ್ 11ರವರೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸೀಗೆಗುಡ್ಡಕ್ಕೆ ತೆರಳುವ ರಸ್ತೆ ಅತ್ಯಂತ ಕಿರಿದಾಗಿದ್ದು, ಕಡಿದಾದ ಇಳಿಜಾರು ಹೊಂದಿದೆ. ರಸ್ತೆಯ ಬದಿಯಲ್ಲಿ ಸೂಕ್ತ ತಡೆಗೋಡೆ ಇಲ್ಲದಿರುವುದರಿಂದ ವಾಹನ ಸವಾರರಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಇದೇ ವೇಳೆ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಅಪಘಾತ ಹಾಗೂ ಇತರ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸ್ ಮತ್ತು ಅರಣ್ಯ ಇಲಾಖೆಯ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 115 ಹಾಗೂ 1989ರ ನಿಯಮ 221ಎ(5)ರ ಅಡಿಯಲ್ಲಿ ಹೊರಡಿಸಿರುವ ಆದೇಶವು ಅಕ್ಟೋಬರ್ 25ರಿಂದ ನವೆಂಬರ್ 11ರವರೆಗೆ ಜಾರಿಯಲ್ಲಿರಲಿದೆ. ಬೇಲೂರು ಮಾರ್ಗದ ಕಲ್ಕೆರೆ ಗ್ರಾಮದಿಂದ ವೀರಾಪುರಕ್ಕೆ ತೆರಳುವ ರಸ್ತೆ, ಹಳೇಬೀಡು ಮಾರ್ಗದ ಸೀಗೆ ಮತ್ತು ವೀರಾಪುರ ಗ್ರಾಮಗಳ ರಸ್ತೆ ಹಾಗೂ ಗೋಳೇನಹಳ್ಳಿ ಮಾರ್ಗವಾಗಿ ಸೀಗೆಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ, ಶ್ರೀ ಮಳೆ ಮಲ್ಲೇಶ್ವರ ಸ್ವಾಮಿಯ ದರ್ಶನ ಪಡೆಯಲು ಬಯಸುವ ಭಕ್ತರು ಮತ್ತು ಪ್ರವಾಸಿಗರಿಗೆ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಜಿಲ್ಲಾಡಳಿತದ ಸುರಕ್ಷತಾ ಕ್ರಮಗಳಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button