Kannada NewsKarnataka NewsLatest

*ಹೆಂಡತಿ, ಮಕ್ಕಳಿದ್ದರೂ 22ರ ಯುವತಿಯನ್ನು ಮದುವೆಯಾದ 40ರ ಮುಸ್ಲಿಂ ಧರ್ಮಗುರು*: *ಪೋಷಕರ ಆಕ್ರೋಶ!*

ಪ್ರಗತಿವಾಹಿನಿ ಸುದ್ದಿ: ಧಾರ್ಮಿಕ ಶಿಕ್ಷಣ ನೀಡುತ್ತಿದ್ದ ಯುವತಿಯನ್ನೇ ಪ್ರೀತಿಸಿ, ತನ್ನ ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದಾರೆ ಎಂಬ ಆರೋಪ ಚರ್ಚೆಗೆ ಕಾರಣವಾಗಿದೆ. ಮದ್ರಸಾದಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ 22 ವರ್ಷದ ಯುವತಿ ಹಾಗೂ 40 ವರ್ಷದ ಧರ್ಮಗುರು ಅಶ್ರಫ್ ಸ ಅದಿ ನಡುವಿನ ವಿವಾಹ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬೆಟಗುಳಿಯ ದಾವುದ್ ಖಾಸಿಂ ಅವರ ಪುತ್ರಿ ಮಗದುಮ್ಮ ಹಾಗೂ ಮಂಗಳೂರಿನ ಅಸೈಗೋಳಿ ನಿವಾಸಿ ಅಶ್ರಫ್ ಸ ಅದಿ ನಡುವೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಅಶ್ರಫ್ ಈ ಹಿಂದೆ ಕುಮಟಾದ ಮದ್ರಸಾದಲ್ಲಿ ಧರ್ಮಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಯುವತಿ ಅಲ್ಲಿಗೆ ಧಾರ್ಮಿಕ ಶಿಕ್ಷಣ ಪಡೆಯಲು ಬರುತ್ತಿದ್ದಳು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪರಿಚಯ ಬೆಳೆದು ಪ್ರೇಮಕ್ಕೆ ತಿರುಗಿತ್ತು.

ಬಳಿಕ ಕುಮಟಾ ತೊರೆದು ಮುಂಬೈಗೆ ತೆರಳಿದ್ದ ಅಶ್ರಫ್, ಅಕ್ಟೋಬರ್ 22ರಂದು ಮತ್ತೆ ಕುಮಟಾಗೆ ಆಗಮಿಸಿ ಯುವತಿಯನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ನಂತರ ಇಬ್ಬರೂ ನಿಖಾ ಮಾಡಿಕೊಂಡಿದ್ದು, ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ. ಮಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿ ಮಂಗಳೂರಿಗೆ ಬಂದು ಕೊಣಾಜೆ ಪೊಲೀಸ್ ಠಾಣೆಗೆ ತೆರಳಿದ್ದರು.

ಪ್ರಕರಣದ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಧರ್ಮಗುರು ಹಾಗೂ ಯುವತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೋಷಕರು ಮಗಳನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಯುವತಿ ಪೋಷಕರೊಂದಿಗೆ ತೆರಳಲು ನಿರಾಕರಿಸಿದ್ದಾಳೆ. ತಾನು ವಯಸ್ಕಳಾಗಿದ್ದು, ಅಶ್ರಫ್ ಜೊತೆ ಜೀವನ ನಡೆಸಲು ಬಯಸುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾಳೆ. ಮಗಳ ನಿರ್ಧಾರದಿಂದ ಪೋಷಕರು ಠಾಣೆಯ ಆವರಣದಲ್ಲೇ ಕಣ್ಣೀರಿಟ್ಟಿದ್ದಾರೆ.

ಅಶ್ರಫ್‌ಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ. ಆದರೆ ಈ ವಿಚಾರವನ್ನು ಯುವತಿಯಿಂದ ಮುಚ್ಚಿಟ್ಟು ಮದುವೆಯಾಗಿದ್ದಾರೆ ಎಂದು ಪೋಷಕರ ಆರೋಪ ಮಾಡಿದ್ದಾರೆ. ಧಾರ್ಮಿಕ ಮಾರ್ಗದರ್ಶನ ನೀಡಬೇಕಾದ ವ್ಯಕ್ತಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಮುದಾಯದ ಕೆಲವು ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಅಶ್ರಫ್ ನಡೆಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಲು ಅಶ್ರಫ್ ನಿರಾಕರಿಸಿದ್ದು, ಯುವತಿಯೊಂದಿಗೆ ತೆರಳಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಯುವತಿಯ ಸ್ವಯಂ ನಿರ್ಧಾರ, ಪೋಷಕರ ಆರೋಪಗಳು ಹಾಗೂ ಮೊದಲ ಮದುವೆಯ ವಿಚಾರಗಳು ಇದೀಗ ಚರ್ಚೆಯ ಕೇಂದ್ರವಾಗಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button