*ಕೊರಗಜ್ಜನ ಮೂಲ ಸಮುದಾಯಕ್ಕೆ ಸ್ವಂತ ಸೂರಿಲ್ಲ*: *8 ವರ್ಷಗಳ ಹೋರಾಟಕ್ಕೆ ಮುಕ್ತಿ ಯಾವಾಗ?*

ಪ್ರಗತಿವಾಹಿನಿ ಸುದ್ದಿ: ತುಳುನಾಡಿನ ಮೂಲೆಮೂಲೆಯಲ್ಲೂ ಭಕ್ತಿಯಿಂದ ಆರಾಧಿಸಲ್ಪಡುವ, ಭಕ್ತರ ಕಷ್ಟಗಳಿಗೆ ಸ್ಪಂದಿಸುವ ಕಾರ್ಣಿಕದ ದೈವ ಕೊರಗಜ್ಜ. ನ್ಯಾಯ, ಧರ್ಮಕ್ಕಾಗಿ ಬೇಡಿಕೊಂಡರೆ ಕೊರಗಜ್ಜ ಕೈಹಿಡಿಯುತ್ತಾನೆ ಎಂಬುದು ಭಕ್ತರ ಬಲವಾದ ನಂಬಿಕೆ. ಆದರೆ, ಕೋಟ್ಯಂತರ ಭಕ್ತರಿಂದ ಪೂಜಿಸಲ್ಪಡುವ ಕೊರಗಜ್ಜನ ಮೂಲ ಸಮುದಾಯವಾದ ಕೊರಗ ಜನಾಂಗದ 33 ಕುಟುಂಬಗಳು ಮಂಗಳೂರಿನಲ್ಲೇ ಸ್ವಂತ ನಿವೇಶನವಿಲ್ಲದೆ ತಲೆಮಾರುಗಳಿಂದ ಸಂಕಷ್ಟದ ಬದುಕು ನಡೆಸುತ್ತಿರುವುದು ವಿಪರ್ಯಾಸವಾಗಿದೆ.
ತುಳುನಾಡಿನ ಜಾನಪದ ಪರಂಪರೆಯಲ್ಲಿ ಕೊರಗಜ್ಜ ನೆಮ್ಮದಿ ಮತ್ತು ನ್ಯಾಯದ ಸಂಕೇತ. ಶೋಷಿತ ಮೂಲ ಆದಿವಾಸಿ ಸಮುದಾಯವಾದ ಕೊರಗ ಜನಾಂಗದಲ್ಲಿ ತನಿಯನಾಗಿ ಜನಿಸಿದ ಕೊರಗಜ್ಜ, ಭಕ್ತಿ, ತ್ಯಾಗ ಮತ್ತು ಕೌಶಲ್ಯದ ಮೂಲಕ ದೈವತ್ವಕ್ಕೇರಿದ ಮಹಾನ್ ಶಕ್ತಿಯಾಗಿ ಆರಾಧಿಸಲ್ಪಡುತ್ತಿದ್ದಾರೆ. ಸಣ್ಣಪುಟ್ಟ ವಸ್ತುಗಳು ಕಳೆದುಹೋದರೂ, ದೊಡ್ಡ ವಿವಾದಗಳು ಎದುರಾದರೂ ಕೊರಗಜ್ಜನಿಗೆ ಅಗೆಲು ಹರಕೆ ಹೊತ್ತರೆ ಸಮಸ್ಯೆ ಬಗೆಹರಿಯುತ್ತದೆ ಎಂಬ ನಂಬಿಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದಿಗೂ ಗಟ್ಟಿಯಾಗಿದೆ.
ಆದರೆ, ಇಡೀ ಸಮಾಜಕ್ಕೆ ನ್ಯಾಯ ಒದಗಿಸುವ ದೈವದ ಮೂಲ ಸಮುದಾಯದ ಜನರಿಗೆ ಮಾತ್ರ ನ್ಯಾಯ ಸಿಗುತ್ತಿಲ್ಲ ಎಂಬುದು ನೋವಿನ ಸಂಗತಿಯಾಗಿದೆ. 1930ರ ದಶಕದಲ್ಲೇ ಕೊರಗ ಸಮುದಾಯದ ಹಿರಿಯರಾದ ವೆಂಕಟೇಶ ರಾವ್ ಅವರು ತಮ್ಮ ಜನಾಂಗದ ಸಬಲೀಕರಣಕ್ಕಾಗಿ 9.20 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಆದರೆ, 1970ರ ದಶಕದಲ್ಲಿ ಮುನಿಸಿಪಾಲಿಟಿ ಆ ಭೂಮಿಯನ್ನು ವಶಪಡಿಸಿಕೊಂಡಿತ್ತು ಎಂಬ ಗಂಭೀರ ಆರೋಪವಿದೆ.
ದಶಕಗಳ ಹೋರಾಟದ ಬಳಿಕ 2018ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ವಾಮಂಜೂರು ಬಳಿ 33 ಕುಟುಂಬಗಳಿಗೆ ತಲಾ 2.25 ಸೆಂಟ್ಸ್ನಂತೆ ಮನೆ ನಿವೇಶನ ಹಂಚಿಕೆ ಮಾಡಲು ಅಧಿಕೃತ ಆದೇಶ ಹೊರಡಿಸಿತ್ತು. ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ₹2.83 ಕೋಟಿ ಅನುದಾನವನ್ನೂ ಖರ್ಚು ಮಾಡಿದೆ. ಆದರೆ, ಇಷ್ಟೆಲ್ಲಾ ಪ್ರಕ್ರಿಯೆಗಳು ನಡೆದಿದ್ದರೂ ನಿಜವಾದ ಫಲಾನುಭವಿಗಳಿಗೆ ಇನ್ನೂ ಹಕ್ಕುಪತ್ರ ಮತ್ತು ನಿವೇಶನ ಹಸ್ತಾಂತರವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಳೆದ ಎಂಟು ವರ್ಷಗಳಲ್ಲಿ ಹಕ್ಕುಪತ್ರಕ್ಕಾಗಿ ಈ 33 ಕುಟುಂಬಗಳು ಬರೋಬ್ಬರಿ 17 ಬಾರಿ ಧರಣಿ ಮತ್ತು ಪ್ರತಿಭಟನೆ ನಡೆಸಿವೆ. ಆದರೂ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬುದು ಸಮುದಾಯದ ಅಳಲು. ಇತರ ಪ್ರದೇಶಗಳಲ್ಲಿ ನಿವೇಶನ ಹಂಚಿಕೆ ಮಾಡುವಾಗ ಅನ್ವಯಿಸದ ನಿಯಮಗಳನ್ನು ತಮ್ಮ ಸಮುದಾಯಕ್ಕೆ ಮಾತ್ರ ಅನ್ವಯಿಸಲಾಗುತ್ತಿದೆ. ಆಕ್ಷೇಪಣೆ ಸಲ್ಲಿಸುವ ನೆಪದಲ್ಲಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಕೊರಗ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ವಾಮಂಜೂರಿನ ಸಿಎಚ್ಎಸ್ಆರ್ಡಿ ಸಮೀಪದಲ್ಲಿರುವ ಪಾಲಿಕೆಯ ಪಾಳುಬಿದ್ದ ಹಳೆಯ ವಸತಿ ಗೃಹದಲ್ಲಿ ಈ ಕುಟುಂಬಗಳು ವಾಸಿಸುತ್ತಿವೆ. ತಮಗೆ ನ್ಯಾಯಯುತವಾಗಿ ಸಿಗಬೇಕಾದ ನಿವೇಶನದ ಹಕ್ಕುಪತ್ರವನ್ನು ತಕ್ಷಣವೇ ವಿತರಿಸದಿದ್ದರೆ ಬೆತ್ತಲೆ ಮೆರವಣಿಗೆ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಭಕ್ತರ ಪಾಲಿಗೆ ನ್ಯಾಯದ ಸಂಕೇತವಾಗಿರುವ ಕೊರಗಜ್ಜನ ಮೂಲ ಸಮುದಾಯದ 33 ಕುಟುಂಬಗಳು ಸ್ವಂತ ಸೂರಿಗಾಗಿ ಎಂಟು ವರ್ಷಗಳಿಂದ ಹೋರಾಡುತ್ತಿರುವುದು ವ್ಯವಸ್ಥೆಯ ಮುಂದಿರುವ ಗಂಭೀರ ಪ್ರಶ್ನೆಯಾಗಿದೆ. ಇವರಿಗೆ ನ್ಯಾಯ ಸಿಗುವುದು ಯಾವಾಗ ಎಂಬುದೇ ಈಗ ಎಲ್ಲರ ಮುಂದಿರುವ ಪ್ರಶ್ನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




