*ರಾಜ್ಯದಲ್ಲಿ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ 3 ವರ್ಷ ಅನುಮತಿ ಇಲ್ಲ*: *ಸರ್ಕಾರದಿಂದ ಮಹತ್ವದ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹೊಸ ಖಾಸಗಿ ಪದವಿಪೂರ್ವ (ಪಿಯು) ಕಾಲೇಜುಗಳನ್ನು ಆರಂಭಿಸಲು ಮುಂದಿನ ಮೂರು ಶೈಕ್ಷಣಿಕ ವರ್ಷಗಳವರೆಗೆ ಅನುಮತಿ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2027-28ನೇ ಶೈಕ್ಷಣಿಕ ವರ್ಷದಿಂದ 2029-30ನೇ ಶೈಕ್ಷಣಿಕ ವರ್ಷದವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರಡು ಅಧಿಸೂಚನೆ ಪ್ರಕಟಿಸಿದ್ದು, ಸಾರ್ವಜನಿಕರು ಹಾಗೂ ಸಂಬಂಧಪಟ್ಟವರು ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಅನುದಾನ ಸೇರಿದಂತೆ) ನಿಯಮಗಳು-2024ಕ್ಕೆ ತಿದ್ದುಪಡಿ ತರುವ ಮೂಲಕ ಈ ಕರಡು ಅಧಿಸೂಚನೆ ಹೊರಡಿಸಲಾಗಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಹಲವು ಪಿಯು ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳು ಖಾಲಿ ಉಳಿಯುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಖಾಸಗಿ ಪಿಯು ಕಾಲೇಜುಗಳ ಆರಂಭಕ್ಕೆ ಮಿತಿ ವಿಧಿಸುವಂತೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು. ಸಂಘದ ಪ್ರಮುಖ ಬೇಡಿಕೆಗಳಲ್ಲಿ ಇದೂ ಒಂದಾಗಿತ್ತು.
ಪ್ರಸ್ತುತ ರಾಜ್ಯದಲ್ಲಿ 6,000ಕ್ಕೂ ಹೆಚ್ಚು ಪಿಯು ಕಾಲೇಜುಗಳಿವೆ. ಈಗಾಗಲೇ ಇರುವ ಕಾಲೇಜುಗಳಲ್ಲೇ ಹೆಚ್ಚಿನ ಸಂಖ್ಯೆಯ ಸೀಟುಗಳು ಖಾಲಿ ಉಳಿಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾಲೇಜುಗಳಿಗೆ ಅನುಮತಿ ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಸರ್ಕಾರ ಮುಂದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




