Kannada NewsKarnataka NewsLatest

*ನಿಮಗಾಗಿ ಹೆಲಿಕಾಪ್ಟರ್ ಕಳುಹಿಸುತ್ತೇನೆ ಎಂದ ಸಿಎಂ*: *ಕಾಗೋಡು ತಿಮ್ಮಪ್ಪ ಉತ್ತರಕ್ಕೆ ಭಾರಿ ಮೆಚ್ಚುಗೆ!*

ಪ್ರಗತಿವಾಹಿನಿ ಸುದ್ದಿ: 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯ ಬೆನ್ನಲ್ಲೇ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಈ ವೇಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಕಳುಹಿಸುವುದಾಗಿ ಸಿಎಂ ಹೇಳಿದಾಗ ಕಾಗೋಡು ತಿಮ್ಮಪ್ಪ ನೀಡಿದ ಉತ್ತರ ಗಮನ ಸೆಳೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಡಿಯೋ ಕರೆ ಮೂಲಕ ಮಾತನಾಡಿ, ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸಿದ್ದೀರಿ. ಶುಭವಾಗಲಿ, ಆರೋಗ್ಯದ ಕಡೆ ಗಮನ ಕೊಡಿ ಎಂದು ಹಾರೈಸಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಬರುವಂತೆ ಹೆಲಿಕಾಪ್ಟರ್ ಕಳುಹಿಸುವುದಾಗಿ ಸಿಎಂ ತಿಳಿಸಿದಾಗ, ಹೆಲಿಕಾಪ್ಟರ್ ಬೇಡ, ನಾನೇ ಹೇಗೋ ಬರುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಉತ್ತರಿಸಿದ್ದಾರೆ.

ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಬೆಂಗಳೂರಿಗೆ ಬಂದು ಪ್ರಶಸ್ತಿ ಸ್ವೀಕರಿಸಲು ತೊಂದರೆಯಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರವೇ ಅವರ ನಿವಾಸಕ್ಕೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬಳಿಕ ಸಚಿವರು ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

Related Articles

Back to top button