Belagavi NewsBelgaum NewsKannada NewsKarnataka News

*ರಾಜ್ಯೋತ್ಸವದ ಸಂಭ್ರಮಕ್ಕೆ ಎಂಇಎಸ್ ಕರಾಳ ದಿನದ ಅಡ್ಡಿ; ಬೆಳಗಾವಿಯಲ್ಲಿ ಬಿಗುವಿನ ವಾತಾವರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ನಾಡು, ನುಡಿ, ಸಂಸ್ಕೃತಿಯ ಪ್ರತೀಕವಾದ 71ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಗಡಿನಾಡು ಬೆಳಗಾವಿಯಲ್ಲಿ ಮನೆಮಾಡಿರುವ ಬೆನ್ನಲ್ಲೇ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತೊಮ್ಮೆ ಕರಾಳ ದಿನಾಚರಣೆ ನಡೆಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ. 

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದ್ದರೂ, ಎಂಇಎಸ್ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದಾರೆ.

ನಗರದ ಧರ್ಮವೀರ ಸಂಭಾಜಿ ಉದ್ಯಾನವನದಿಂದ ಆರಂಭಗೊಂಡ ಎಂಇಎಸ್‌ನ ಕರಾಳ ದಿನದ ಮೆರವಣಿಗೆ ಬಸವೇಶ್ವರ ವೃತ್ತದ ಸಮೀಪದ ಮರಾಠ ಮಂದಿರದವರೆಗೆ ಸಾಗುವ ಕಾರ್ಯಕ್ರಮ ರೂಪಿಸಲಾಗಿದೆ. ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದು, ಬೆಳಗಾವಿ ಸೇರಿದಂತೆ ಗಡಿ ಭಾಗದ 865 ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಘೋಷಣೆಗಳನ್ನು ಕೂಗಿದ್ದಾರೆ.

ಪ್ರತಿ ವರ್ಷದ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಎಂಇಎಸ್ ಕರಾಳ ದಿನಾಚರಣೆ ನಡೆಸುತ್ತಾ ಬಂದಿದೆ. ಈ ಬಾರಿಯೂ ಅದೇ ಪರಂಪರೆಯನ್ನು ಮುಂದುವರಿಸಿರುವ ಸಮಿತಿ, ರಾಜ್ಯೋತ್ಸವದ ಸಂಭ್ರಮದ ದಿನದಂದೇ ಕಪ್ಪು ಬಟ್ಟೆ ಹಾಗೂ ಕಪ್ಪು ಬಾವುಟಗಳೊಂದಿಗೆ ತನ್ನ ಪ್ರತಿಭಟನೆ ಪ್ರದರ್ಶಿಸಿದೆ. ಇದರಿಂದ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ.

ಮಹಾರಾಷ್ಟ್ರ ನಾಯಕರಿಗೆ ಪ್ರವೇಶ ನಿರ್ಬಂಧ

ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ವಿವಿಧ ರಾಜಕೀಯ ನಾಯಕರನ್ನು ಎಂಇಎಸ್ ಆಹ್ವಾನಿಸಿತ್ತು. ಅದರಲ್ಲೂ ಉದ್ಧವ್ ಠಾಕ್ರೆ ಬಣದ ನಾಯಕರು ಸೇರಿದಂತೆ ಹಲವು ಮುಖಂಡರು ಬೆಳಗಾವಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದರೆ, ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಳಿತ, ಮಹಾರಾಷ್ಟ್ರದ ನಾಯಕರ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಈ ಮೂಲಕ ಹೊರರಾಜ್ಯದ ನಾಯಕರ ಭಾಗವಹಿಸುವಿಕೆಗೆ ಬ್ರೇಕ್ ಹಾಕಲಾಗಿದೆ.

ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಇನ್ನೊಂದೆಡೆ, ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸುತ್ತಿದ್ದು, ವಿವಿಧ ಕನ್ನಡಪರ ಸಂಘಟನೆಗಳು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸುತ್ತಿವೆ. ಇಂತಹ ಸಂಭ್ರಮದ ವಾತಾವರಣದ ನಡುವೆಯೇ ಎಂಇಎಸ್‌ನ ಕರಾಳ ದಿನಾಚರಣೆ ನಡೆದಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ನಗರದ ಪ್ರಮುಖ ವೃತ್ತಗಳು, ಮೆರವಣಿಗೆಯ ಮಾರ್ಗಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದು, ಮೆರವಣಿಗೆಯ ಚಲನವಲನಗಳ ಮೇಲೂ ನಿಗಾ ವಹಿಸಿದ್ದಾರೆ.

ಒಂದೆಡೆ ಕನ್ನಡಿಗರ ಅಭಿಮಾನ, ಕನ್ನಡದ ಬಾವುಟಗಳ ವೈಭವ, ರಾಜ್ಯೋತ್ಸವದ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಬೆಳಗಾವಿ ನಗರ ಕನ್ನಡಮಯವಾಗಿದ್ದರೆ, ಮತ್ತೊಂದೆಡೆ ಎಂಇಎಸ್‌ನ ಕರಾಳ ದಿನಾಚರಣೆ ಭಾಷಾ ವಿವಾದಕ್ಕೆ ಮತ್ತೆ ಜೀವ ನೀಡಿದೆ. ಹೀಗಾಗಿ ನಾಡಹಬ್ಬದ ಸಂಭ್ರಮದ ನಡುವೆಯೇ ಗಡಿನಾಡು ಬೆಳಗಾವಿಯಲ್ಲಿ ರಾಜಕೀಯ ಹಾಗೂ ಭಾಷಾ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

Related Articles

Back to top button