*ವಿಎಒ ಪರೀಕ್ಷಾ ಅಕ್ರಮ ಬಯಲು*: *ಗೂಗಲ್ ಲೆನ್ಸ್ ಬಳಸಿ ಪರೀಕ್ಷೆ ಬರೆದ ಅಭ್ಯರ್ಥಿ ಪೊಲೀಸ್ ವಶಕ್ಕೆ!*

ಪ್ರಗತಿವಾಹಿನಿ ಸುದ್ದಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಅಭ್ಯರ್ಥಿಯ ಪರೀಕ್ಷಾ ಅಕ್ರಮ ಬಯಲಾಗಿದೆ. ಕೇವಲ 25 ಅಂಕ ಪಡೆದಿದ್ದ ಅಭ್ಯರ್ಥಿ, ಮತ್ತೊಂದು ಪರೀಕ್ಷೆಯಲ್ಲಿ 151.25 ಅಂಕ ಗಳಿಸಿದ್ದು ಭಾರಿ ಅನುಮಾನಕ್ಕೆ ಕಾರಣವಾಗಿತ್ತು. ಇದೀಗ ಪರೀಕ್ಷಾ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮೊಬೈಲ್ ಬಳಸಿ ಗೂಗಲ್ ಲೆನ್ಸ್ ಮೂಲಕ ಉತ್ತರ ಪಡೆದಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹಾನಗಲ್ ತಾಲೂಕಿನ ಎಲೆಪೇಟೆ ನಿವಾಸಿ ಶಂಕರ ಬನ್ನೂರ ಬಂಧಿತ ಅಭ್ಯರ್ಥಿ. ಕೆಎಸ್ಆರ್‌ಪಿ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೇವಲ 25 ಅಂಕ ಗಳಿಸಿದ್ದ ಶಂಕರ, ಕೇವಲ 15 ದಿನಗಳ ಅಂತರದಲ್ಲಿ ನಡೆದ ವಿಎಒ ಪರೀಕ್ಷೆಯಲ್ಲಿ 151.25 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ. ಒಎಂಆರ್ ಉತ್ತರ ಪತ್ರಿಕೆಯಲ್ಲಿ ಯಾವುದೇ ತಪ್ಪು ಅಥವಾ ಹೆಚ್ಚುವರಿ ಮಾರ್ಕಿಂಗ್ ಇಲ್ಲದೆ ಇಷ್ಟು ಹೆಚ್ಚಿನ ಅಂಕ ಗಳಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹಾಗೂ ಅನುಮಾನಕ್ಕೆ ಕಾರಣವಾಗಿತ್ತು.
ಪ್ರಕರಣದ ಗಂಭೀರತೆ ಅರಿತ ಕೆಇಎ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಅವರು ಸಮಗ್ರ ತನಿಖೆ ನಡೆಸುವಂತೆ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸವಣೂರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಶಿಗ್ಗಾವಿಯ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಶಂಕರ ಮೊಬೈಲ್ ಬಳಸಿ ಪ್ರಶ್ನೆ ಪತ್ರಿಕೆಯನ್ನು ಗೂಗಲ್ ಲೆನ್ಸ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ಉತ್ತರ ಪಡೆಯುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
ಭದ್ರತಾ ಲೋಪದ ಲಾಭ ಪಡೆದಿದ್ದ ಅಭ್ಯರ್ಥಿ
ವಿಚಾರಣೆ ವೇಳೆ ಶಂಕರ ಪರೀಕ್ಷಾ ಕೇಂದ್ರದ ಭದ್ರತಾ ಲೋಪದ ಲಾಭ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಸಿಬ್ಬಂದಿ ಆಧಾರ್ ಕಾರ್ಡ್ ಮಾತ್ರ ಪರಿಶೀಲಿಸಿದ್ದರು. ಸಮರ್ಪಕ ದೇಹ ತಪಾಸಣೆ ನಡೆಯದ ಕಾರಣ ಮೊಬೈಲ್ ಸಮೇತ ಪರೀಕ್ಷಾ ಕೊಠಡಿ ಪ್ರವೇಶಿಸಿದ್ದಾಗಿ ತಿಳಿಸಿದ್ದಾನೆ.
ಕೊಠಡಿಯ ಕೊನೆಯ ಡೆಸ್ಕ್‌ನಲ್ಲಿ ಕುಳಿತಿದ್ದರಿಂದ ಯಾರಿಗೂ ತಿಳಿಯದಂತೆ ಗೂಗಲ್ ಲೆನ್ಸ್ ಮೂಲಕ ಪ್ರಶ್ನೆಗಳನ್ನು ಸ್ಕ್ಯಾನ್ ಮಾಡಿ ಉತ್ತರ ಪಡೆದು ಒಎಂಆರ್ ಶೀಟ್ ಭರ್ತಿ ಮಾಡಿದ್ದಾಗಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.
ಸದ್ಯ ಹಾನಗಲ್ ಠಾಣೆ ಪೊಲೀಸರು ಶಂಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ತಡರಾತ್ರಿ ಶಿಗ್ಗಾವಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯ ಲೋಪದ ಬಗ್ಗೆಯೂ ತನಿಖೆ ಮುಂದುವರಿದಿದೆ.



