Film & EntertainmentKannada NewsKarnataka NewsLatest

*ಬಿಗ್‌ಬಾಸ್ ಮನೆಯಲ್ಲಿ ಪ್ರೇಮ ಪ್ರಸಂಗ*: *ಮಗಳನ್ನೇ ವಾಪಸ್ ಕರೆದುಕೊಂಡು ಹೋಗಲು ಬಂದ ಪೋಷಕರು*

ಪ್ರಗತಿವಾಹಿನಿ ಸುದ್ದಿ: ಬಿಗ್‌ಬಾಸ್ ಮನೆಯಲ್ಲಿ ಪ್ರೀತಿ, ಪ್ರೇಮದ ವಿಚಾರಗಳು ಹೊಸದೇನಲ್ಲ. ಆದರೆ ಮಲಯಾಳಂ ಬಿಗ್‌ಬಾಸ್‌ನಲ್ಲಿ ನಡೆದಿರುವ ಘಟನೆಯೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸಹಸ್ಪರ್ಧಿಯ ಮೇಲೆ ಪ್ರೀತಿ ಶುರುವಾಗಿದೆ ಎಂದು ಸ್ಪರ್ಧಿಯೊಬ್ಬರು ಹೇಳಿಕೊಂಡ ಬೆನ್ನಲ್ಲೇ, ಆಕೆಯ ಪೋಷಕರೇ ನೇರವಾಗಿ ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ. ಮಗಳನ್ನು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡು ಹೋಗುವಂತೆ ನಿರೂಪಕ ಮೋಹನ್‌ಲಾಲ್ ಅವರಲ್ಲಿ ಮನವಿ ಮಾಡಿದ್ದಾರೆ.

ಬಿಗ್‌ಬಾಸ್ ಮಲಯಾಳಂ ಸೀಸನ್ 8ರ ಇತಿಹಾಸದಲ್ಲೇ ಮೊದಲ ಬಾರಿಗೆ ಫ್ಯಾಮಿಲಿ ವೀಕ್ ಹೊರತುಪಡಿಸಿ ವಾರಾಂತ್ಯದ ಸಂಚಿಕೆಯಲ್ಲಿ ಸ್ಪರ್ಧಿಯ ಪೋಷಕರು ನೇರವಾಗಿ ವೇದಿಕೆಗೆ ಪ್ರವೇಶಿಸಿದ್ದಾರೆ. ಸ್ಪರ್ಧಿ ನೇಹಾ ಫಾತಿಮಾ ಅವರ ತಂದೆ-ತಾಯಿ ಕಣ್ಣೀರಿಡುತ್ತಲೇ ವೇದಿಕೆಗೆ ಬಂದಿದ್ದಾರೆ. ಈ ವೇಳೆ ನಿರೂಪಕ ಮೋಹನ್‌ಲಾಲ್ ಅವರೊಂದಿಗೆ ಮಾತನಾಡಿದ ಪೋಷಕರು, ನೇಹಾ ಮನೆಯೊಳಗೆ ಏನು ಮಾಡುತ್ತಿದ್ದಾಳೆ ಎಂದು ಪ್ರಶ್ನಿಸಿದ್ದಾರೆ.

ಬಳಿಕ ಮಗಳೊಂದಿಗೆ ಮಾತನಾಡಿದ ತಂದೆ, “ನೇಹಾ, ನಾವಿಬ್ಬರೂ ನೆನಪಿದ್ದೀವಾ? ನೀನು ನಮ್ಮನ್ನು ಮರೆತಿರುವೆ ಎಂದೇ ನನಗನಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಾಯಿಯೂ ಕಣ್ಣೀರಿಡುತ್ತಾ ಮಗಳ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಎಲ್ಲರೂ ಆಟವಾಡುತ್ತಿದ್ದಾರೆ. ಆದರೆ ನೀನು ಭಾವನೆಗಳಿಗೆ ಸಿಲುಕಿಕೊಳ್ಳುತ್ತಿದ್ದೀಯ. ನಿನ್ನನ್ನು ಬಳಸಿಕೊಳ್ಳಲಾಗುತ್ತಿದೆ. ಬೇಡವೆಂದು ಹೇಳಿದ ಆಟವನ್ನೇ ನೀನು ಮುಂದುವರಿಸುತ್ತಿದ್ದೀಯ. ಒಂದು ನಿರೀಕ್ಷೆಗೆ ಅಂಟಿಕೊಂಡಿರುವುದು ನನಗೆ ತುಂಬಾ ನೋವುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.

ನೇಹಾಳನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗಲು ಪೋಷಕರು ಬಂದಿದ್ದಾರೆ ಎಂದು ಮೋಹನ್‌ಲಾಲ್ ತಿಳಿಸಿದ್ದಾರೆ. ಈ ದೃಶ್ಯಗಳು ಕಾರ್ಯಕ್ರಮದ ವೀಕ್ಷಕರ ಗಮನ ಸೆಳೆದಿವೆ.

ಇತ್ತೀಚಿನ ಸಂಚಿಕೆಯಲ್ಲಿ ನೇಹಾ ಸಹ ಸ್ಪರ್ಧಿ ತಾಶಿ ಮೇಲೆ ಪ್ರೀತಿ ಮೂಡಿರುವುದಾಗಿ ಹೇಳಿಕೊಂಡಿದ್ದರು. ಪೋಷಕರು ಒಪ್ಪಿದರೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕವೂ ಈ ಸಂಬಂಧವನ್ನು ಮುಂದುವರಿಸಲು ಬಯಸುವುದಾಗಿ ತಿಳಿಸಿದ್ದರು. ತಾಶಿ, ವೇದಂಗಿ ಜೊತೆ ಸ್ನೇಹದಿಂದ ವರ್ತಿಸುತ್ತಿರುವುದನ್ನು ಕಂಡು ನೇಹಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಬಳಿಕ ತಾಶಿಗೆ ಪ್ರೇಮ ನಿವೇದನೆಯನ್ನೂ ಮಾಡಿದ್ದರು.

ಇನ್ನು ಕನ್ನಡ ಬಿಗ್‌ಬಾಸ್‌ನಲ್ಲೂ ಹಲವು ಜೋಡಿಗಳು ಗಮನ ಸೆಳೆದಿವೆ. ಯಶಸ್ ಮತ್ತು ಆಸಿಯಾ, ಯಶಸ್ ಮತ್ತು ಸೌಂದರ್ಯಾ, ತಾಂಡವ್ ಮತ್ತು ಸೋನಿಕಾ ಸೇರಿದಂತೆ ಹಲವು ಸ್ಪರ್ಧಿಗಳ ನಡುವೆ ಆತ್ಮೀಯತೆ ಬೆಳೆದಿತ್ತು. ಆದರೆ ಮಲಯಾಳಂ ಬಿಗ್‌ಬಾಸ್‌ನಲ್ಲಿ ನಡೆದಿರುವ ಈ ಬೆಳವಣಿಗೆ ಮಾತ್ರ ಪೋಷಕರನ್ನೇ ನೇರವಾಗಿ ವೇದಿಕೆಗೆ ಕರೆತಂದಿರುವುದು ವಿಶೇಷ.

Related Articles

Back to top button