*ದೇಶದ ಟಾಪ್ 15 ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ*: *ಯೋಗಿ ನಂ.1, ಸಿದ್ದು, ಡಿಕೆಗಿಲ್ಲ ಸ್ಥಾನ*

ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯೊಂದು ಇದೀಗ ಬಿಡುಗಡೆಯಾಗಿದೆ. ಫೇಮ್ ಇಂಡಿಯಾ ಮ್ಯಾಗಜೀನ್ ಮತ್ತು ಏಷ್ಯಾ ಪೋಸ್ಟ್ ನಡೆಸಿದ 2026ರ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರೇ ಇಲ್ಲ. ಹಾಗಾದರೆ ಸಮೀಕ್ಷೆಯಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ? ಕರ್ನಾಟಕದ ಮುಖ್ಯಮಂತ್ರಿ ಪಟ್ಟಿಯಿಂದ ಹೊರಗುಳಿದಿದ್ದೇಕೆ?
ಫೇಮ್ ಇಂಡಿಯಾ ಮತ್ತು ಏಷ್ಯಾ ಪೋಸ್ಟ್ ಜಂಟಿಯಾಗಿ ನಡೆಸಿದ ಈ ಸಮೀಕ್ಷೆಯಲ್ಲಿ ಮುಖ್ಯಮಂತ್ರಿಗಳ ನಾಯಕತ್ವ, ಆಡಳಿತ ಸಾಮರ್ಥ್ಯ, ಕಾರ್ಯಶೈಲಿ, ಜನಪ್ರಿಯತೆ ಮತ್ತು ಆಡಳಿತದ ವಿವಿಧ ಅಂಶಗಳನ್ನು ಪರಿಗಣಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಒಟ್ಟು 1000 ಅಂಕಗಳ ಆಧಾರದಲ್ಲಿ ಶ್ರೇಯಾಂಕ ನೀಡಲಾಗಿದೆ.
ಈ ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ 897 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ 881 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ 874 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ 856 ಅಂಕ ಪಡೆದಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ 844 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 842 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.
ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ 838 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದಿದ್ದಾರೆ. ತೆಲಂಗಾಣದ ರೇವಂತ್ ರೆಡ್ಡಿ 827 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಮಧ್ಯಪ್ರದೇಶದ ಮೋಹನ್ ಯಾದವ್ 803 ಅಂಕಗಳೊಂದಿಗೆ ಒಂಬತ್ತನೇ ಹಾಗೂ ಮೇಘಾಲಯದ ಕಾನ್ರಾಡ್ ಸಂಗ್ಮಾ 802 ಅಂಕಗಳೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.
ಇನ್ನು 11ರಿಂದ 15ನೇ ಸ್ಥಾನದವರೆಗೆ ಇರುವ ಐವರು ಮುಖ್ಯಮಂತ್ರಿಗಳನ್ನು ‘ಮುಖ್ಯಮಂತ್ರಿ ಪಂಚರತ್ನ’ ಎಂಬ ಪ್ರತ್ಯೇಕ ವಿಭಾಗದಲ್ಲಿ ಗುರುತಿಸಲಾಗಿದೆ. ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ 788 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿದ್ದಾರೆ. ದೆಹಲಿಯ ರೇಖಾ ಗುಪ್ತಾ 768, ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ 766, ಗುಜರಾತ್ನ ಭೂಪೇಂದ್ರ ಪಟೇಲ್ 760 ಹಾಗೂ ರಾಜಸ್ಥಾನದ ಭಜನ್ ಲಾಲ್ ಶರ್ಮಾ 746 ಅಂಕಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಸರಿಲ್ಲ. ಸಮೀಕ್ಷೆಯ ಆಯ್ಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಅವರು ಸ್ಥಾನ ಪಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅವರು ಯಾವ ನಿರ್ದಿಷ್ಟ ಮಾನದಂಡದಲ್ಲಿ ಅರ್ಹತೆ ಪಡೆಯಲಿಲ್ಲ ಎಂಬುದಕ್ಕೆ ಸ್ಪಷ್ಟ ಕಾರಣ ನೀಡಲಾಗಿಲ್ಲ.
ಒಟ್ಟಿನಲ್ಲಿ, ಈ ಸಮೀಕ್ಷೆಯ ಶ್ರೇಯಾಂಕದಲ್ಲಿ ಯೋಗಿ ಆದಿತ್ಯನಾಥ್ ಅಗ್ರಸ್ಥಾನ ಪಡೆದಿದ್ದು, ದಕ್ಷಿಣ ಭಾರತದ ಇಬ್ಬರು ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಮತ್ತು ರೇವಂತ್ ರೆಡ್ಡಿ ಕೂಡ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಸಿದ್ದ ಹಾಗೂ ಡಿಕೆ ಇಲ್ಲದಿರೋದು ಕರ್ನಾಟಕದ ಜನತೆಗೆ ಬೇಸರ ತರಿಸಿದೆ.




