Kannada NewsLatestNational

*ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರ ಅಟ್ಟಹಾಸಕ್ಕೆ ಬ್ರೇಕ್; 20 ಮೀನುಗಾರರ ರಕ್ಷಿಸಿದ ಭಾರತೀಯ ನೌಕಾಪಡೆ*

ಪ್ರಗತಿವಾಹಿನಿ ಸುದ್ದಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ನೌಕೆಯನ್ನು ಅಪಹರಿಸಿದ್ದ ಶಸ್ತ್ರಸಜ್ಜಿತ ಕಡಲ್ಗಳ್ಳರ ವಿರುದ್ಧ ಭಾರತೀಯ ನೌಕಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನೌಕೆಯಲ್ಲಿದ್ದ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದೆ.

ಮುಂಬೈನಿಂದ ಸುಮಾರು 3,000 ಕಿಲೋಮೀಟರ್‌ಗೂ ಅಧಿಕ ದೂರದಲ್ಲಿರುವ ಅರಬ್ಬಿ ಸಮುದ್ರದಲ್ಲಿ ‘ಅಜಿನಿ’ ಎಂಬ ಮೀನುಗಾರಿಕಾ ನೌಕೆಯನ್ನು ಕಡಲ್ಗಳ್ಳರು ಅಪಹರಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಭಾರತೀಯ ನೌಕಾಪಡೆ, ಸತತ 48 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಪಹರಣಕ್ಕೊಳಗಾದ ನೌಕೆಯ ಸ್ಥಳವನ್ನು ಪತ್ತೆಹಚ್ಚಿದೆ.

ನವೆಂಬರ್ 2ರಂದು ನಡೆದ ಕಾರ್ಯಾಚರಣೆಯಲ್ಲಿ ಶಸ್ತ್ರಸಜ್ಜಿತ ಕಡಲ್ಗಳ್ಳರನ್ನು ಎದುರಿಸಿ, ನೌಕೆಯಲ್ಲಿದ್ದ ಎಲ್ಲಾ 20 ಸಿಬ್ಬಂದಿಯನ್ನು ಯಾವುದೇ ಅಪಾಯವಿಲ್ಲದೆ ರಕ್ಷಿಸಲಾಗಿದೆ. ಭಾರತೀಯ ವಾಯುಪಡೆಯ ಸಮಯೋಚಿತ ನೆರವು ಕಾರ್ಯಾಚರಣೆಗೆ ಹೆಚ್ಚಿನ ಬಲ ನೀಡಿದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದು, ಸಮುದ್ರದಲ್ಲಿ ಎದುರಾಗುವ ಯಾವುದೇ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತೀಯ ನೌಕಾಪಡೆ ಸದಾ ಸನ್ನದ್ಧವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮುದ್ರಯಾನದ ಸುರಕ್ಷತೆಯನ್ನು ಕಾಪಾಡುವಲ್ಲಿ ಭಾರತದ ಬದ್ಧತೆಯನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಸಾಬೀತುಪಡಿಸಿದೆ. ಮುಕ್ತ ಹಾಗೂ ಸುರಕ್ಷಿತ ಹಿಂದೂ ಮಹಾಸಾಗರವನ್ನು ಖಚಿತಪಡಿಸಿಕೊಳ್ಳಲು ಭಾರತ ಸದಾ ಬದ್ಧವಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

Related Articles

Back to top button