*ಗ್ರಾಹಕರ ಆಕ್ರೋಶಕ್ಕೆ ಮಣಿದ ಸರ್ಕಾರ*: *ನಂದಿನಿ ಮೊಸರಿನ ದರ ಲೀಟರ್ಗೆ 2 ರೂಪಾಯಿ ಕಡಿತ*

ಪ್ರಗತಿವಾಹಿನಿ ಸುದ್ದಿ: ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಹಕರಿಗೆ ಕೊಂಚ ರಿಲೀಫ್ ನೀಡುವ ಉದ್ದೇಶದಿಂದ ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್ಗೆ 2 ರೂಪಾಯಿ ಕಡಿತಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಕೆಎಂಎಫ್ ಹಾಲಿನ ಪ್ಯಾಕೆಟ್ಗಳ ದರ ಹೆಚ್ಚಿಸುವುದರ ಜೊತೆಗೆ ಮೊಸರಿನ ಬೆಲೆಯನ್ನೂ ಏರಿಕೆ ಮಾಡಿತ್ತು. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರು, ಹೋಟೆಲ್ ಮಾಲೀಕರು ಹಾಗೂ ವಿರೋಧ ಪಕ್ಷಗಳು ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಹಲವೆಡೆ ಪ್ರತಿಭಟನೆಗಳೂ ನಡೆದಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಸಾರ್ವಜನಿಕರ ಅಸಮಾಧಾನವನ್ನು ಪರಿಗಣಿಸಿದ ಮುಖ್ಯಮಂತ್ರಿ, ಕೆಎಂಎಫ್ ಅಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮೊಸರಿನ ದರ ಇಳಿಸುವಂತೆ ನಿರ್ದೇಶನ ನೀಡಿದ್ದಾರೆ. ಹಾಲು ಉತ್ಪಾದಕರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ. ಅದೇ ಸಮಯದಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಆಗದಂತೆ ಸಮತೋಲನ ಕಾಪಾಡುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಮೊಸರಿನ ಬೆಲೆಯನ್ನು 2 ರೂಪಾಯಿ ಕಡಿಮೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಸೂಚನೆಯ ಬೆನ್ನಲ್ಲೇ ಕೆಎಂಎಫ್ ಪರಿಷ್ಕೃತ ದರಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ. ಇದರಿಂದ ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಗುವ ಸಾಧ್ಯತೆಯಿದೆ. ಆದರೆ, ಪರಿಷ್ಕೃತ ದರ ಯಾವಾಗಿನಿಂದ ಜಾರಿಗೆ ಬರಲಿದೆ ಎಂಬುದರ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.



