*ಸಿದ್ದು ಸ್ಟಿಂಗ್ ಪ್ರಕರಣದಲ್ಲಿ ಸಿಸಿಬಿಗೆ ಸಂಕಷ್ಟ*: *HDK ವಿಚಾರಣೆಗೆ ಪೊಲೀಸರಿಗೆ ಸಾಕ್ಷ್ಯಾಧಾರಗಳ ಕೊರತೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ವಿವಾದಿತ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ತನಿಖೆಯ ಹಂತದಲ್ಲಿ ಮಂಕಾದಂತೆ ಕಾಣುತ್ತಿದೆ. ಆರಂಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಈವರೆಗೆ ಮಹತ್ವದ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಅದರಲ್ಲೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಆರೋಪಗಳಿಗೆ ಪೂರಕವಾದ ಬಲವಾದ ಸಾಕ್ಷ್ಯಗಳು ಇನ್ನೂ ಲಭ್ಯವಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಈ ಸ್ಟಿಂಗ್ ಆಪರೇಷನ್ ಹಿಂದೆ ಕುಮಾರಸ್ವಾಮಿ ಅವರ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಆದರೆ ಪ್ರಕರಣದಲ್ಲಿ ಕೇಳಿಬಂದಿರುವ ರಿತೇಶ್ ಪಾಂಡೆ ಯಾರೆಂಬುದೇ ತನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರು. ಮತ್ತೊಂದೆಡೆ, ಪ್ರಕರಣದ ಪ್ರಮುಖ ಕೊಂಡಿ ಎನ್ನಲಾಗಿರುವ ಪ್ರಜ್ವಲ್ ಪ್ರಸಾದ್ ಅವರ ಹೇಳಿಕೆಯನ್ನು ಸಿಸಿಬಿ ಪೊಲೀಸರು ಈವರೆಗೂ ಅಧಿಕೃತವಾಗಿ ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ.
ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆಸಬೇಕು ಎಂಬ ಒತ್ತಡ ಸರ್ಕಾರದ ಮಟ್ಟದಲ್ಲಿ ಇದೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಕೇಂದ್ರ ಸಚಿವರಂತಹ ಪ್ರಮುಖ ನಾಯಕರನ್ನು ವಿಚಾರಣೆಗೆ ಒಳಪಡಿಸಲು ಅಗತ್ಯವಾದ ಕಾನೂನುಬದ್ಧ ಸಾಕ್ಷ್ಯಾಧಾರಗಳು ಪೊಲೀಸರ ಬಳಿ ಇಲ್ಲ ಎನ್ನಲಾಗಿದೆ. ಹೀಗಾಗಿ ನೋಟಿಸ್ ನೀಡುವ ವಿಚಾರದಲ್ಲೂ ಸಿಸಿಬಿ ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ಇನ್ನು ಎಫ್ಐಆರ್ನಲ್ಲಿ ದಾಖಲಿಸಿರುವ ಕಾನೂನು ಸೆಕ್ಷನ್ಗಳು ಮತ್ತು ಲಭ್ಯವಿರುವ ಸಾಕ್ಷ್ಯಗಳ ವಿಚಾರವೂ ತನಿಖೆಗೆ ಸವಾಲಾಗಿದೆ. ಸದ್ಯಕ್ಕೆ ಗಟ್ಟಿಯಾದ ಪುರಾವೆಗಳು ಸಿಗುವವರೆಗೂ ಮುಂದಿನ ಕ್ರಮ ಕೈಗೊಳ್ಳದಿರಲು ಪೊಲೀಸರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕುಮಾರಸ್ವಾಮಿ ಮತ್ತು ಅವರ ಆಪ್ತರ ಕೈವಾಡವಿದೆ ಎಂದು ಆರೋಪಿಸಿದ್ದರು. ಪುರಾವೆಗಳ ಆಧಾರದ ಮೇಲೆಯೇ ಈ ಹೇಳಿಕೆ ನೀಡುತ್ತಿರುವುದಾಗಿ ತಿಳಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ, ನನ್ನನ್ನು ಅಷ್ಟು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ. ಪೂರ್ತಿ ಪಿಕ್ಚರ್ ತೋರಿಸುತ್ತೇನೆ. ಸರ್ಕಾರ, ಮುಖ್ಯಮಂತ್ರಿ, ಸಚಿವರು ಅಥವಾ ಅಧಿಕಾರಿಗಳಿಂದ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದರು.
ಒಟ್ಟಿನಲ್ಲಿ, ರಾಜಕೀಯವಾಗಿ ಭಾರಿ ಸದ್ದು ಮಾಡಿದ್ದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ತನಿಖೆಯ ವೇಗ ಕುಂಠಿತವಾಗಿರುವುದು ಚರ್ಚೆಗೆ ಕಾರಣವಾಗಿದೆ. ಆರೋಪ-ಪ್ರತ್ಯಾರೋಪಗಳ ನಡುವೆ ಸಿಸಿಬಿ ತನಿಖೆಯಿಂದ ಮುಂದೇನು ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.


