
ಪ್ರಗತಿವಾಹಿನಿ ಸುದ್ದಿ: ಅಂಕೋಲಾ: ಕೆಎಲ್ಇ ಸಂಸ್ಥೆಗಳ ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಶಿಕ್ಷಣ ತಜ್ಞೆ ಹಾಗೂ ಸಮರ್ಥ ಆಡಳಿತಗಾರ್ತಿ ಡಾ. ಮೀನಲ್ ಕಿರಣ್ ನಾರ್ವೇಕರ (78) ಅವರು ನಿಧನರಾಗಿದ್ದಾರೆ.
1982ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ಸೇವೆ ಆರಂಭಿಸಿದ್ದ ಅವರು, ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
1999ರಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ, 2001ರಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಆಡಳಿತಾಧಿಕಾರಿಗಳಾಗಿ, 2016ರಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾಗಿ ಹಾಗೂ 2026ರಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಅವರು, ತಮ್ಮ ದಕ್ಷ ಆಡಳಿತ, ಕರ್ತವ್ಯನಿಷ್ಠೆ, ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ಸಂಸ್ಥೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದರು. ಸರಳ ವ್ಯಕ್ತಿತ್ವ ಹಾಗೂ ಕಾರ್ಯದಕ್ಷತೆಯಿಂದ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಗೌರವಾದರಗಳಿಗೆ ಪಾತ್ರರಾಗಿದ್ದರು.
ಅವರ ನಿಧನಕ್ಕೆ ಕೆಎಲ್ಇ ಸಂಸ್ಥೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಅಗಲಿಕೆಯಿಂದ ಸಂಸ್ಥೆಯು ಅನುಭವಿ ಶಿಕ್ಷಣ ತಜ್ಞೆ ಹಾಗೂ ಸಮರ್ಥ ಆಡಳಿತಗಾರ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದೆ.
ಅಗಲಿದ ಚೇತನಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂಸ್ಥೆ ಪ್ರಾರ್ಥಿಸಿದೆ.



