*ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ: ಚನ್ನರಾಜ ಹಟ್ಟಿಹೊಳಿ ಬೇಸರ*

ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ : ಚನ್ನರಾಜ ಹಟ್ಟಿಹೊಳಿ ಬೇಸರ
ಪ್ರಗತಿವಾಹಿನಿ ಸುದ್ದಿ, ಬೆನಕನಹಳ್ಳಿ (ಬೆಳಗಾವಿ) : ತಮ್ಮ ಬದುಕಿನ ಬಹುಪಾಲು ಸಮಯವನ್ನು ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಡುವ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಪ್ರೀತಿ, ನೆಮ್ಮದಿ ಮತ್ತು ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿಷಾದಿಸಿದ್ದಾರೆ.

ಮಂಗಳವಾರ ಬೆನಕನಹಳ್ಳಿಯಲ್ಲಿ ಸ್ವಾಮಿ ಛಾಯಾ ಪ್ರತಿಷ್ಠಾನದ ಘರಕುಲ ವೃದ್ಧಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾವು ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಸಾಧನೆ, ಅಭಿವೃದ್ಧಿ, ಸಂಪತ್ತು, ಯಶಸ್ಸಿನ ಬಗ್ಗೆ ಮಾತನಾಡುತ್ತೇವೆ. ಆದರೆ ಸಮಾಜದ ನಿಜವಾದ ಶ್ರೀಮಂತಿಕೆ ಅಳೆಯಬೇಕಾದದ್ದು, ಅದು ತನ್ನ ಹಿರಿಯರನ್ನು ಎಷ್ಟು ಗೌರವದಿಂದ ನೋಡಿಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ. ಹಿರಿಯರು ನಮ್ಮ ಕುಟುಂಬದ ಆಸ್ತಿ ಮಾತ್ರವಲ್ಲ, ನಮ್ಮ ಸಮಾಜದ ಅನುಭವದ ಸಂಪತ್ತು. ಅವರು ಬದುಕಿನಲ್ಲಿ ಕಂಡ ಏಳುಬೀಳುಗಳು, ಎದುರಿಸಿದ ಸವಾಲುಗಳು, ಕಲಿಸಿದ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಅವರು ಹೇಳಿದರು.
ನನ್ನ ದೃಷ್ಟಿಯಲ್ಲಿ ಸೇವೆ ಎಂದರೆ ಕೇವಲ ಹಣ ಕೊಡುವುದಲ್ಲ. ಅವರೊಂದಿಗೆ ಕಳೆಯುವ ಸಮಯವೂ ಸೇವೆಯೇ. ಒಬ್ಬ ಹಿರಿಯರ ಕೈ ಹಿಡಿಯುವುದು ಸೇವೆ. ಅವರೊಂದಿಗೆ ನಾಲ್ಕು ಪ್ರೀತಿಯ ಮಾತುಗಳನ್ನು ಆಡುವುದು ಸೇವೆ. ಅವರಿಗೆ ಅಗತ್ಯವಿರುವಾಗ ನೆರವಾಗುವುದು ಸಹ ಸೇವೆ. ಈ ಸಮಾಜಕ್ಕೆ ದಿಕ್ಕು ತೋರಿಸಲು ಹಿರಿಯರು ಬೇಕು. ಅವರು ನಮ್ಮ ಅಮೂಲ್ಯವಾದ ಆಸ್ತಿ ಎಂದು ಚನ್ನರಾಜ ಹೇಳಿದರು.
ಘರಕುಲ ವೃದ್ದಾಶ್ರಮಕ್ಕೆ ಪ್ರತಿ ವರ್ಷ ನಮ್ಮಿಂದಾದ ಸೇವೆ ಸಲ್ಲಿಸುತ್ತೇವೆ. ಇದು ಸಹಾಯ ಎಂದು ಭಾವಿಸದೆ, ನಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ. ನೀವು ನಮಗೆ ಕೊಟ್ಟಿರುವ ಜವಾಬ್ದಾರಿನ್ನು ನಿರ್ವಹಿಸುತ್ತೇವೆ. ಇದು ದೇವರ ಕೆಲಸ, ಇದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದ ಅವರು, 2001ರಲ್ಲಿ ತಿಲಕವಾಡಿಯ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಕೇವಲ ಮೂವರು ಹಿರಿಯರೊಂದಿಗೆ ಆರಂಭವಾದ ಘರಕುಲದ ಸೇವೆ, ಇಂದು ಬೆನಕನಹಳ್ಳಿಯ ವಿಶಾಲ ಪರಿಸರದಲ್ಲಿ ಅನೇಕ ಹಿರಿಯರಿಗೆ ಆಸರೆಯಾಗಿರುವುದು ದೊಡ್ಡ ಸಾಧನೆ ಎಂದು ಹೇಳಿದರು.
ಹಿರಿಯರನ್ನು ನೋಡಿಕೊಳ್ಳುವುದು ಹೊರೆ ಅಲ್ಲ. ಅದು ನಮ್ಮ ಸಂಸ್ಕಾರ. ಅದು ನಮ್ಮ ಕೃತಜ್ಞತೆ. ಅದು ನಮ್ಮ ಮಾನವೀಯತೆಯ ಪ್ರತಿಬಿಂಬ.ಇಲ್ಲಿ ವಸತಿ, ಆಹಾರ, ಆರೋಗ್ಯದ ಆರೈಕೆ, ವೈದ್ಯಕೀಯ ತಪಾಸಣೆ, ಧ್ಯಾನ, ವಾಯುವಿಹಾರ, ಮನರಂಜನೆ, ಹಬ್ಬ-ಹರಿದಿನಗಳ ಆಚರಣೆ ಸೇರಿದಂತೆ ಹಿರಿಯರ ನೆಮ್ಮದಿಯ ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ಹಿರಿಯರ ಆರೋಗ್ಯದ ಬಗ್ಗೆ ತೋರುತ್ತಿರುವ ಕಾಳಜಿ ಮೆಚ್ಚುವಂತಹದ್ದು ಎಂದು ಪ್ರಸಂಸಿಸಿದರು.

ಗೌರವ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಸಚಿನ್ ಸಬ್ನಿಸ್, 25 ವರ್ಷಗಳ ಘರಕುಲದ ಸೇವೆ ಸಣ್ಣ ಕೆಲಸವಲ್ಲ. ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾದದ್ದು. ಅವರು ಜ್ಞಾನದ ಭಂಡಾರ ಇದ್ದಂತೆ. ಅವರ ಅನುಭವಗಳೇ ನಮಗೆ ಜೀವನದ ದಾರಿದೀಪ. ಅವರು ನಮ್ಮಿಂದ ದೊಡ್ಡದೇನನ್ನೂ ಅಪೇಕ್ಷಿಸುವುದಿಲ್ಲ. ಅವರೊಂದಿಗೆ ಸ್ವಲ್ಪ ಸಮಯ ಕಳೆಯುವುದೇ ಅವರು ನಮ್ಮಿಂದ ನಿರೀಕ್ಷಿಸುವಂತದ್ದು. ಆದರೆ, ಇಂದು ಯುವಕರ ಮೇಲೆ ಸಾಕಷ್ಟು ಒತ್ತಡ, ಜವಾಬ್ದಾರಿ ಇರುವುದರಿಂದ ಹಿರಿಯರಿಂದ ದೂರ ಇರಬೇಕಾದ ಅನಿವಾರ್ಯತೆ ಇದೆ. ಹಿರಿಯರೊಂದಿಗೆ ಸಮಯ ಕಳೆಯಲು ಅವರಿಗೆ ಆಗುವುದಿಲ್ಲ ಎಂದು ಹೇಳಿದರು. ಕಳೆದ ಹಲವು ವರ್ಷಗಳಿಂದ ಘರಕುಲದೊಂದಿಗಿನ ತಮ್ಮ ಸಂಬಂಧವನ್ನು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಅನಿಲ ಪೋತದಾರ, ಘರಕುಲ ಆರಂಭವಾದ ಸಂದರ್ಭ, ಅದರ ಹಿಂದಿನ ತ್ಯಾಗ ಮತ್ತು ಕಳೆದ 25 ವರ್ಷದಲ್ಲಿ ನಡೆದುಬಂದ ದಾರಿಯನ್ನು ವಿವರಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕಳುಹಿಸಿದ ಸಂದೇಶವನ್ನು ಈ ಸಂದರ್ಭದಲ್ಲಿ ಓದಲಾಯಿತು. ಬೆಳ್ಳಿ ಹಬ್ಬದ ನಿಮಿತ್ತ ಹೊರತಂದಿರುವ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು.
ವೈಷ್ಣವಿ ನಾಡಗೌಡ ಸ್ವಾಗತ ಗೀತೆ ಹಾಡಿದರು. ಸ್ವಾಮಿ ಛಾಯಾ ಪ್ರತಿಷ್ಠಾನದ ಅಧ್ಯಕ್ಷರಾದ ರಾಜೀವ್ ಪೋತದಾರ ಘರಕುಲ ಆಶ್ರಮದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಶೈಲಾ ಚಾಟೆ ಮತ್ತು ಚಿಂತಾಮಣಿ ಗ್ರಾಮೋಪಾಧ್ಯೆ ಅತಿಥಿಗಳನ್ನು ಪರಿಚಯಿಸಿದರು. ಲಕ್ಷ್ಮೀ ಪೋತದಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎನ್.ಬಿ. ದೇಶಪಾಂಡೆ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.



