
ಪ್ರಗತಿವಾಹಿನಿ ಸುದ್ದಿ: ವಿಜಯಪುರದ ಜನರ ಬಹುದಿನಗಳ ನಿರೀಕ್ಷೆ ಕೊನೆಗೂ ನನಸಾಗುವ ಹಂತಕ್ಕೆ ಬಂದಿದೆ. ವಿಮಾನ ನಿಲ್ದಾಣ ಸಿದ್ಧವಾಗಿ ಹಲವು ತಿಂಗಳು ಕಳೆದಿದ್ದರೂ ವಿಮಾನ ಹಾರಾಟ ಆರಂಭವಾಗಿರಲಿಲ್ಲ. ಇದೀಗ ಡಿಸೆಂಬರ್ ಅಂತ್ಯದೊಳಗೆ ವಿಜಯಪುರದಿಂದ ವಿಮಾನ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಸಚಿವರು, ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ 2024ರ ಅಂತ್ಯಕ್ಕೆ ಪೂರ್ಣಗೊಂಡಿದೆ. ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆಯೂ ತೆರವಾಗಿದೆ. 2026ರ ಅಕ್ಟೋಬರ್ 7ರಂದು ಪರಿಸರ ಇಲಾಖೆಯ ಎನ್ಒಸಿ ಹಾಗೂ ಡಿಜಿಸಿಎ ಪರವಾನಗಿ ಪಡೆಯಲು ಪ್ರಗತಿ ಪೋರ್ಟಲ್ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯ ಅನುಮತಿಗಳನ್ನು ಪಡೆದು ಡಿಸೆಂಬರ್ ಅಂತ್ಯದೊಳಗೆ ವಿಮಾನ ಹಾರಾಟ ಆರಂಭಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು, ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಸಮಗ್ರ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ 13 ತಾಲೂಕುಗಳ 211 ಗ್ರಾಮ ಪಂಚಾಯಿತಿಗಳು ಹಾಗೂ 11 ನಗರ ಪ್ರದೇಶಗಳಿಗೆ ನೀರು ಪೂರೈಸುವ ಉದ್ದೇಶದಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರನ್ನು ಶುದ್ಧೀಕರಿಸಿ ಪೂರೈಸಲು 3,059 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಪೈಕಿ ಈಗಾಗಲೇ 2,095 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮೂಲಕ ಉದ್ಯಮ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಗೂ ಒತ್ತು ನೀಡಲಾಗಿದೆ. 2025ರ ನವೆಂಬರ್ನಿಂದ ಈವರೆಗೆ ಜಿಲ್ಲೆಯಲ್ಲಿ 6,713 ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆನ್ಲೈನ್ ಮೂಲಕ ಉದ್ಯಮ ನೋಂದಣಿ ಪ್ರಮಾಣಪತ್ರ ಪಡೆದಿವೆ. ಇದರಿಂದ 32.43 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದ್ದು, 81 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ, ಕೆಐಎಡಿಬಿ ಮುಳವಾಡ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ವತಿಯಿಂದ 1,622 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಯಾಕೇಜ್ಡ್ ಕಾರ್ಬೋನೇಟೆಡ್ ಸಾಫ್ಟ್ ಡ್ರಿಂಕ್ಸ್ ಮತ್ತು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅನುಮೋದನೆ ದೊರೆತಿದೆ. ಈ ಘಟಕಕ್ಕೆ ನವೆಂಬರ್ 16ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದರಿಂದ 1,200 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು,
ಇನ್ನು, ಪರಿಸರ ಜಾಗೃತಿಗಾಗಿ 2026-27ನೇ ಸಾಲಿನ ವೃಕ್ಷೋತ್ಥಾನ ಮ್ಯಾರಾಥಾನ್ ಅನ್ನು ಡಿಸೆಂಬರ್ 13ರಂದು ಆಯೋಜಿಸಲಾಗಿದೆ. 20 ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಇದು ದೇಶದ ಪ್ರಮುಖ ಗ್ರೀನ್ ಮ್ಯಾರಾಥಾನ್ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.


