CrimeKannada NewsNational

*ಕನಸಿನಲ್ಲಿ ಬಂದು ಕಾಡಿದ ಕೊಲೆಯಾದ ಸ್ನೇಹಿತ*: *ಭಯದಿಂದ ಪೊಲೀಸರಿಗೆ ಶರಣಾದ ಆರೋಪಿ*

ಪ್ರಗತಿವಾಹಿನಿ ಸುದ್ದಿ: ಸ್ನೇಹಿತನನ್ನು ಕೊಲೆ ಮಾಡಿ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಯುವಕನೊಬ್ಬ, ಮೃತಪಟ್ಟ ಸ್ನೇಹಿತ ಪದೇಪದೇ ಕನಸಿನಲ್ಲಿ ಬಂದು ಕಾಡುತ್ತಿದ್ದಾನೆ ಎಂಬ ಭಯದಿಂದ ಕೊನೆಗೆ ಪೊಲೀಸರಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿಯಲ್ಲಿ ನಡೆದಿದೆ.

ಡೊಂಬಿವ್ಲಿ ನಿವಾಸಿ, ಹೌಸ್‌ಕೀಪಿಂಗ್ ಕೆಲಸಗಾರ ಪ್ರಭು ಕಾರ್ಕಡೆ (24) ಬಂಧಿತ ಆರೋಪಿ. ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಸ್ವಯಂ ಹಾಜರಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸೋಮವಾರ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಫುಲ್ಲ ಜಾಧವ್ ತಿಳಿಸಿದ್ದಾರೆ.

ಎರಡು ವಾರಗಳ ಹಿಂದೆ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕದಮ್ (43) ಎಂಬುವವರ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ಮುಂದೆ ಪ್ರಭು ತಾನೇ ಬಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮೃತ ವಿಶಾಲ್ ಕದಮ್ ಅವರ ಮನೆಯಲ್ಲೇ ಇಬ್ಬರೂ ಮದ್ಯಪಾನ ಮಾಡುತ್ತಿದ್ದ ವೇಳೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಪ್ರಭು ಆತನನ್ನು ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ ಕೋಪರ್ ಲಿಂಕ್ ರಸ್ತೆಯ ಸಮೀಪದ ನಿರ್ಜನ ಪ್ರದೇಶದಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ.

ಆರಂಭದಲ್ಲಿ ಕೊಲೆ ಮಾಡಿ ಸುಲಭವಾಗಿ ತಪ್ಪಿಸಿಕೊಂಡಿದ್ದೇನೆ ಎಂದು ಭಾವಿಸಿದ್ದ ಆರೋಪಿಗೆ, ಘಟನೆ ಬಳಿಕ ಮಾನಸಿಕ ಕಿರಿಕಿರಿ ಶುರುವಾಗಿದೆ. ಮೃತಪಟ್ಟ ಸ್ನೇಹಿತ ಪದೇಪದೇ ಕನಸಿನಲ್ಲಿ ಕಾಣಿಸಿಕೊಂಡು ಹೆದರಿಸುತ್ತಿದ್ದ. ಇದರಿಂದ ಭಯಭೀತನಾಗಿದ್ದ ಪ್ರಭುಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕನಸಿನ ಭಯ ಹಾಗೂ ಪಶ್ಚಾತ್ತಾಪದಿಂದ ಕಂಗೆಟ್ಟ ಆರೋಪಿ ಕೊನೆಗೆ ಪೊಲೀಸರ ಬಳಿಗೆ ತೆರಳಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಮೃತದೇಹ ಎಸೆದಿದ್ದ ಸ್ಥಳವನ್ನೂ ಪೊಲೀಸರಿಗೆ ತೋರಿಸಿದ್ದಾನೆ.

ಈ ಸಂಬಂಧ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 103(1)ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Related Articles

Back to top button