
ಪ್ರಗತಿವಾಹಿನಿ ಸುದ್ದಿ: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ. ಪ್ರಕರಣದ ಸಂಪೂರ್ಣ ವಿವರಗಳನ್ನು ಎಸ್ ಐಟಿ ಕಲೆಹಾಕುತ್ತಿದೆ.
ಸೌಜನ್ಯ ಸಾವಿನ ರಹಸ್ಯವು ಮಹತ್ವದ ವರದಿಯೊಂದರಲ್ಲಿ ಅಡಗಿದೆ ಎಂದು ತನಿಖಾ ತಂಡ ಭಾವಿಸಿದೆ. ಮರುತನಿಖೆಯ ಸಂದರ್ಭದಲ್ಲಿ ಹಲವು ಹೊಸ ಮಾಹಿತಿಗಳು ಹೊರಬೀಳುತ್ತಿದೆ.
ಸೌಜನ್ಯ ಸಾವಿನ ಬಗ್ಗೆ 14 ವರ್ಷಗಳ ಹಿಂದೆ ಸಂಗ್ರಹಿಸಲಾದ ವೆಜಿನಲ್ ಸ್ವಾಬ್ ವರದಿಗಾಗಿ ಕಾಯುತ್ತಿದೆ. 2012ರ ಅಕ್ಟೋಬರ್ 10ರಂದು ಖಾಕಿ ಪಡೆ ಈ ಸ್ವಾಬ್ ಮಾದರಿಯನ್ನು ಸಂಗ್ರಹಿಸಿತ್ತು. ಬೆಳ್ತಂಗಡಿ ಠಾಣೆ ಪೊಲೀಸರು ಅಕ್ಟೋಬರ್ 20ರಂದು ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಆಗ ಫಂಗಸ್ ಬಂದಿದೆ ಎಂಬ ವರದಿ ಬಂದಿತ್ತು. ಆದರೆ, ಈಗ ಅದೇ ಸ್ವಾಬ್ ಮಾದರಿಯನ್ನು ಮರುಪರೀಕ್ಷೆಗಾಗಿ ರವಾನಿಸಲಾಗಿದೆ.
ಈ ಮರುಪರೀಕ್ಷೆಯನ್ನು ಫಂಗಸ್ ಬಂದಿದ್ದರೂ ಡಿಎನ್ಎ ಪರೀಕ್ಷೆ ಮಾಡಿ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರುವ ಹೈದರಾಬಾದ್ನ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ನಡೆಸಲಾಗುತ್ತಿದೆ.
ಕಳೆದ ಏಳೆಂಟು ದಿನಗಳ ಹಿಂದೆಯೇ ತನಿಖಾ ತಂಡ ಈ ಮಾದರಿಯನ್ನು ಮರುಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದೆ. ವರದಿ ಬಂದಲ್ಲಿ, ಅದರಲ್ಲಿ ಆರೋಪಿಗಳ ಡಿಎನ್ಎ ಪತ್ತೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಡಿಎನ್ಎಯನ್ನು ಈಗಿನ ಆರೋಪಿಗಳಿಗೆ ಹೊಂದಿಸಿ ತನಿಖೆಯನ್ನು ಮುಂದುವರಿಸಲಿದೆ. ಮರುತನಿಖೆಯ ಸಂದರ್ಭದಲ್ಲಿ ಹಲವು ಹೊಸ ಮಾಹಿತಿಗಳು ಹೊರಬೀಳುತ್ತಿದ್ದು, ಈ ವರದಿಯಿಂದ ಸೌಜನ್ಯ ಸಾವಿನ ರಹಸ್ಯ ಬಯಲಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.


