Kannada NewsKarnataka NewsLatest

*ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬೀಳುತ್ತಾ ಬೀಗ?*: *ಕೊನೆಯ ವಿಮಾನಯಾನ ಸಂಸ್ಥೆಯೂ ಸೇವೆ ಸ್ಥಗಿತ!*

ಪ್ರಗತಿವಾಹಿನಿ ಸುದ್ದಿ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ವಿಮಾನ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಈಗಾಗಲೇ ಎರಡು ವಿಮಾನಯಾನ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿದ್ದು, ಇದೀಗ ಕೊನೆಯದಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸ್ಟಾರ್ ಏರ್ ಕೂಡ ಬುಕಿಂಗ್ ಸ್ಥಗಿತಗೊಳಿಸಿದೆ. ನವೆಂಬರ್ 21ರಿಂದ ವಿಮಾನ ಹಾರಾಟ ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ವ್ಯಕ್ತವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಇಂಡಿಗೋ ಮತ್ತು ಸ್ಪೈಸ್‌ಜೆಟ್ ಈಗಾಗಲೇ ಸೇವೆ ಸ್ಥಗಿತಗೊಳಿಸಿವೆ. ಮೇ 1ರಿಂದ ಇಂಡಿಗೋ ತನ್ನ ಶಿವಮೊಗ್ಗ-ಬೆಂಗಳೂರು ಮಾರ್ಗದ ಹಾರಾಟ ನಿಲ್ಲಿಸಿದ್ದರೆ, ಜೂನ್ 9ರಿಂದ ಸ್ಪೈಸ್‌ಜೆಟ್ ಕೂಡ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಇದೀಗ ಸ್ಟಾರ್ ಏರ್ ಕೂಡ ಹಿಂದೆ ಸರಿಯುವ ಸೂಚನೆ ನೀಡಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಶಿವಮೊಗ್ಗದಿಂದ ವಿಮಾನ ಪ್ರಯಾಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಇಲ್ಲದಿರುವುದು, ಸೂಕ್ತ ಸರ್ಕಾರಿ ಬೆಂಬಲ ಮತ್ತು ಪ್ರೋತ್ಸಾಹದ ಕೊರತೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತಿದೆ. ಇದರ ಜೊತೆಗೆ ಆರ್‌ಸಿಎಸ್-ಉಡಾನ್ ಯೋಜನೆಯಡಿ ನೀಡಲಾಗುತ್ತಿದ್ದ ಆರ್ಥಿಕ ಸಬ್ಸಿಡಿ ಅವಧಿ ಮುಕ್ತಾಯಗೊಂಡಿರುವುದೂ ವಿಮಾನಯಾನ ಸಂಸ್ಥೆಗಳಿಗೆ ಹೊರೆಯಾಗಿದೆ.

ಪ್ರಸ್ತುತ ವಿಮಾನ ನಿಲ್ದಾಣದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೇತನ ಮತ್ತು ನಿರ್ವಹಣಾ ವೆಚ್ಚ ಸೇರಿ ತಿಂಗಳಿಗೆ ಸುಮಾರು 95 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡರೆ ಈ ವ್ಯವಸ್ಥೆಯ ನಿರ್ವಹಣೆಯೂ ಪ್ರಶ್ನೆಯಾಗಲಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ವಿಮಾನ ಸೇವೆಗಳ ಸ್ಥಗಿತ ತಾತ್ಕಾಲಿಕ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಉಡಾನ್-6 ಯೋಜನೆಗೆ ಸಿದ್ಧತೆ ನಡೆಸುತ್ತಿದೆ. ರಾಜ್ಯ ಸರ್ಕಾರವೂ ಶಿವಮೊಗ್ಗದಿಂದ 10 ಹೊಸ ವಿಮಾನ ಮಾರ್ಗಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಮುಂದಿನ ಎರಡು ತಿಂಗಳಲ್ಲಿ ಮತ್ತೆ ವಿಮಾನ ಸೇವೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಭರವಸೆ ನೀಡಿದ್ದಾರೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವೇ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಮಲೆನಾಡಿನ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕ ಮೂಡಿಸಿದೆ. ಇದೀಗ ಶಿವಮೊಗ್ಗದ ವಿಮಾನ ಸಂಪರ್ಕ ಮತ್ತೆ ಯಾವಾಗ ಆರಂಭವಾಗಲಿದೆ ಎಂಬುದೇ ಪ್ರಯಾಣಿಕರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

Related Articles

Back to top button