Kannada NewsKarnataka NewsLatestSports

*ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ವಿದಾಯ*: *64 ಪಂದ್ಯಗಳ ಪಯಣಕ್ಕೆ ತೆರೆ*

ಪ್ರಗತಿವಾಹಿನಿ ಸುದ್ದಿ: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಶಮಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾವುಕ ಸಂದೇಶ ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳಿದ್ದಾರೆ.

ಭಾರತದ ಟೆಸ್ಟ್ ಜೆರ್ಸಿ ಮೊದಲ ಬಾರಿಗೆ ಧರಿಸಿದ ಕ್ಷಣವನ್ನು ನೆನಪಿಸಿಕೊಂಡಿರುವ ಶಮಿ, ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಕನಸಿನೊಂದಿಗೆ ಮೈದಾನಕ್ಕಿಳಿದಿದ್ದಾಗಿ ಬರೆದುಕೊಂಡಿದ್ದಾರೆ. ಪ್ರತಿ ವಿಕೆಟ್, ಹೋರಾಟ, ಗಾಯ ಮತ್ತು ಪುನರಾಗಮನ ತಮ್ಮ ಜೀವನಕ್ಕೆ ಅಮೂಲ್ಯ ಪಾಠಗಳನ್ನು ಕಲಿಸಿವೆ. ಟೆಸ್ಟ್ ಕ್ರಿಕೆಟ್ ತಮ್ಮ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು ಎಂದು ಭಾವುಕವಾಗಿ ತಿಳಿಸಿದ್ದಾರೆ.

ಸಹ ಆಟಗಾರರು, ಕೋಚ್‌ಗಳು, ಕುಟುಂಬದವರು ಮತ್ತು ಕಷ್ಟದ ಸಮಯದಲ್ಲೂ ತಮ್ಮ ಮೇಲೆ ನಂಬಿಕೆ ಇಟ್ಟ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದ ಬಿಸಿಸಿಐ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆಗೂ ಕೃತಜ್ಞತೆ ತಿಳಿಸಿದ್ದಾರೆ.

ಶಮಿ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್‌ಗಳನ್ನು ಕಬಳಿಸಿದ್ದು, 27.71ರ ಸರಾಸರಿ ಹೊಂದಿದ್ದಾರೆ. ಆರು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ 56 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. 2013ರ ನವೆಂಬರ್ 6ರಂದು ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ್ದ ಶಮಿ, 13 ವರ್ಷಗಳ ಬಳಿಕ ಅದೇ ದಿನ ನಿವೃತ್ತಿ ಘೋಷಿಸಿರುವುದು ವಿಶೇಷ.

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ ಶಮಿ ಸಂಪೂರ್ಣವಾಗಿ ಕ್ರಿಕೆಟ್‌ನಿಂದ ದೂರವಾಗುತ್ತಿಲ್ಲ. ಏಕದಿನ ಮತ್ತು ಟಿ20 ಸೇರಿದಂತೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯುವ ಉದ್ದೇಶ ಹೊಂದಿದ್ದಾರೆ.


Related Articles

Back to top button