*ಸಚಿವ ಕೃಷ್ಣ ಬೈರೇಗೌಡ ಎದುರಲ್ಲೇ ಕಾಂಗ್ರೆಸ್ ಮಾಜಿ ಎಮ್ಎಲ್ಸಿ ಹಾಗೂ ಬಿಜೆಪಿ ಎಮ್ಎಲ್ಎಗಳ ನಡುವೆ ಗಲಾಟೆ*: *ಕೈ ಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿದ ಘಟನೆ*

ಪ್ರಗತಿವಾಹಿನಿ ಸುದ್ದಿ: ಸಚಿವ ಕೃಷ್ಣ ಬೈರೇಗೌಡ ಎದುರೇ ಕಾಂಗ್ರೆಸ್ ನ ಮಾಜಿ ಎಂಎಲ್ ಸಿ ಹಾಗೂ ಬಿಜೆಪಿ ಎಂಎಲ್ ಎಗಳ ನಡುವೆ ಗಲಾಟೆ ನಡೆದಿದ್ದು, ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿರುವ ಘಟನೆ ನಡೆದಿದೆ.
ಬೆಂಗಳೂರಿನ ವೈಟ್ಫೀಲ್ಡ್ ಸಮೀಪದ ಟಿನ್ ಫ್ಯಾಕ್ಟರಿ ಬಳಿ ನಡೆದ ವಾರ್ಡ್ ಒನ್ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಭೈರೇಗೌಡರ ಮುಂದೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ತೀವ್ರ ಘರ್ಷಣೆ ನಡೆದಿದೆ.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಪ್ರಮುಖ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಶಾಸಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಎರಡೂ ಕಡೆ ಗಲಾಟೆ ಶುರುವಾಯಿತು. ಸಚಿವ ಕೃಷ್ಣಬೈರೇಗೌಡ ಅವರು ಹಾಜರಿದ್ದರೂ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಬ್ಬರು ಮುಖಂಡರು ಕೈ ಕೈ ಮಿಲಾಯಿಸುವ ಹಂತ ತಲುಪಿದ್ದಾರೆ.
ತಕ್ಷಣ ಮಧ್ಯಪ್ರವೇಶ ಮಾಡಿದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಗಲಾಟೆಯನ್ನು ನಿಯಂತ್ರಿಸಿದ್ದಾರೆ.



