*ಏಳು ಮಂದಿಯ ಹತ್ಯೆ ಪ್ರಕರಣ*: *ಶಿರಾಡಿ ಘಾಟ್ನಲ್ಲಿ ಮತ್ತೆರಡು ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನಾಪತ್ತೆಯಾಗಿದ್ದ ಕುಟುಂಬದ ಸದಸ್ಯರ ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಮತ್ತೆರಡು ಶವಗಳು ಪತ್ತೆಯಾಗಿವೆ. ಇದರೊಂದಿಗೆ ಏಳು ಮಂದಿಯ ಮೃತದೇಹಗಳ ಪತ್ತೆ ಕಾರ್ಯ ಪೂರ್ಣಗೊಂಡಿದೆ. ಶಿರಾಡಿ ಘಾಟ್ನಲ್ಲಿ ಪತ್ತೆಯಾದ ಶವಗಳು ಶಂಕರ್ ಮತ್ತು ನಳಿನಿ ಅವರದ್ದೆಂದು ಗುರುತಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ರಾಜಾಜಿನಗರ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಂಡ ಬೆಂಗಳೂರಿನಿಂದ ಸ್ಥಳಕ್ಕೆ ತೆರಳಿದೆ. ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
ಇಂದೇ ಮೃತದೇಹಗಳ ಹಸ್ತಾಂತರ?
ಈಗಾಗಲೇ ಮೈಸೂರಿನ ಚಾಮುಂಡಿಬೆಟ್ಟದ ಬಳಿ ದಿವ್ಯಾ ಮತ್ತು ಶಿವಕುಮಾರ್ ಅವರ ಮೃತದೇಹಗಳು ಪತ್ತೆಯಾಗಿದ್ದವು. ತಮಿಳುನಾಡಿನ ಸೇಲಂ ಪ್ರದೇಶದಲ್ಲಿ ರೂಪವತಿ ಮತ್ತು ಸುನೀತಾ ಅವರ ಶವಗಳು ಪತ್ತೆಯಾಗಿದ್ದವು. ಇದೀಗ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳೂ ಪತ್ತೆಯಾಗಿರುವುದರಿಂದ ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.
ಏಳು ವರ್ಷದ ಬಾಲಕ ಪುನೀತ್ನ ಅಂತ್ಯಕ್ರಿಯೆಯನ್ನು ನವೆಂಬರ್ 7ರಂದು ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿಸಲಾಗಿತ್ತು. ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಇಂದೂಶೇಖರ್ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



