Kannada NewsKarnataka NewsLatestPolitics

*ಹಾಸನ ಡಿಸಿ ಲತಾಕುಮಾರಿ ಹೊಸ ಪೋಸ್ಟ್*: *ಹೆಚ್‌ಡಿಕೆ ಆರೋಪಕ್ಕೆ ಸಿಂಹದ ಚಿತ್ರದ ಮೂಲಕ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಗ್ದಾಳಿ ಮತ್ತೊಂದು ಹಂತಕ್ಕೆ ತಲುಪಿದೆ. ಕುಮಾರಸ್ವಾಮಿ ಮಾಡಿರುವ ಲಂಚದ ಆರೋಪಕ್ಕೆ ಈಗಾಗಲೇ ತಿರುಗೇಟು ನೀಡಿದ್ದ ಜಿಲ್ಲಾಧಿಕಾರಿ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಸಿಂಹ ಸುಮ್ಮನೆ ಕುಳಿತಿದ್ದರೂ ನಾಯಿಗಳು ಬೊಗಳುತ್ತಿರುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, “Not every voice deserves a response” ಎಂಬ ಬರಹವನ್ನೂ ಸೇರಿಸಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಇದಕ್ಕೂ ಮೊದಲು ಕುಮಾರಸ್ವಾಮಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಲತಾಕುಮಾರಿ, ತಮ್ಮನ್ನು ಕರ್ತವ್ಯದ ಮೊದಲ ದಿನದಿಂದಲೇ ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹ ಆರೋಪಗಳಿಗೆ ತಾವು ಹೆದರುವುದಿಲ್ಲ. ಎಲ್ಲವನ್ನೂ ಎದುರಿಸಲು ಸಿದ್ಧವಾಗಿಯೇ ಬಂದಿದ್ದೇವೆ ಎಂದಿರುವ ಜಿಲ್ಲಾಧಿಕಾರಿ, ಕುಮಾರಸ್ವಾಮಿ ಅವರ ಆರೋಪಗಳು ಸಂಪೂರ್ಣ ಸುಳ್ಳು ಎಂದಿದ್ದಾರೆ.

ಸುಳ್ಳು ಆರೋಪಗಳ ವಿರುದ್ಧ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ವಿಚಾರವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರುವುದಾಗಿ ಹೇಳಿದ್ದರು. ಅಲ್ಲದೆ, ತಮ್ಮ ಕಚೇರಿಯಿಂದ ಯಾವುದೇ ತಪ್ಪಾದ ಸಂದೇಶ ರವಾನೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.

ಕುಮಾರಸ್ವಾಮಿ ಮಾಡಿದ್ದ ಆರೋಪವೇನು?

ಇದಕ್ಕೂ ಮುನ್ನ ಹಾಸನ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿದ್ದರು. ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಪ್ ಚಾಟ್‌ಗಳನ್ನು ಬಿಡುಗಡೆ ಮಾಡಿ, ವಿವಿಧ ಸರ್ಕಾರಿ ಕೆಲಸಗಳಿಗಾಗಿ ಹಣದ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪಗಳನ್ನು ಜಿಲ್ಲಾಧಿಕಾರಿ ನಿರಾಕರಿಸಿದ್ದು, ಚಾಟ್‌ಗಳ ಸತ್ಯಾಸತ್ಯತೆ ಪರಿಶೀಲನೆಗೆ ತನಿಖೆ ನಡೆಯಬೇಕೆಂದು ತಿಳಿಸಿದ್ದಾರೆ.

ಇದೀಗ ಜಿಲ್ಲಾಧಿಕಾರಿ ಹಂಚಿಕೊಂಡಿರುವ ಸಿಂಹದ ಚಿತ್ರದ ಪೋಸ್ಟ್ ಈ ವಿವಾದಕ್ಕೆ ಮತ್ತೊಂದು ಆಯಾಮ ನೀಡಿದೆ. ಆದರೆ ಈ ಪೋಸ್ಟ್ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Related Articles

Back to top button