*ಊಟಕ್ಕೆ ಮಾಡಿದ ಪಲ್ಯ ಯಾವುದು ಎಂದು ಕೇಳಿದ್ದೇ ತಪ್ಪಾಯ್ತಾ?*: *ಮಾಜಿ ಸೈನಿಕನನ್ನೇ ಚಾಕುವಿನಿಂದ ಇರಿದು ಕೊಂದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಊಟದ ವಿಚಾರವಾಗಿ ಪತಿ-ಪತ್ನಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಗುಜರಾತ್ನ ಅಹಮದಾಬಾದ್ನ ನರೋಡಾ ಪ್ರದೇಶದಲ್ಲಿ ನಡೆದಿದೆ.
ಊಟಕ್ಕೆ ಯಾವ ತರಕಾರಿ ಪಲ್ಯ ಮಾಡಿದ್ದೀಯಾ? ಎಂದು ಪತಿ ಕೇಳಿದ್ದಕ್ಕೆ ಕೋಪಗೊಂಡ ಪತ್ನಿ, ಮಾಜಿ ಸೈನಿಕನಾಗಿದ್ದ ತನ್ನ ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ.
ಮೃತರನ್ನು ದಿಲೀಪ್ ಖರಾಡೆ ಎಂದು ಗುರುತಿಸಲಾಗಿದೆ. ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೇನೆಯಿಂದ ನಿವೃತ್ತಿಯಾದ ಬಳಿಕ ಅಹಮದಾಬಾದ್ನ ನರೋಡಾ ಪ್ರದೇಶದಲ್ಲಿ ಪತ್ನಿ ನಿರ್ಮಲಾ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಜೀವನೋಪಾಯಕ್ಕಾಗಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಪೊಲೀಸರ ಪ್ರಕಾರ, ದಂಪತಿ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು. ಆಗಾಗ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಅದರಂತೆ ನಿನ್ನೆ ರಾತ್ರಿ ಊಟದ ಸಮಯದಲ್ಲಿ ದಿಲೀಪ್ ಅವರು ಪತ್ನಿ ನಿರ್ಮಲಾಗೆ, “ಇವತ್ತು ಯಾವ ತರಕಾರಿ ಪಲ್ಯ ಮಾಡಿದ್ದೀಯಾ?” ಎಂದು ಪ್ರಶ್ನಿಸಿದ್ದಾರೆ. ಈ ಸಾಮಾನ್ಯ ಪ್ರಶ್ನೆಯೇ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ ಆಕ್ರೋಶಗೊಂಡ ನಿರ್ಮಲಾ ಅಡುಗೆ ಮನೆಯಲ್ಲಿದ್ದ ಚಾಕು ತಂದು ಪತಿಯ ಎದೆಗೆ ಇರಿದಿದ್ದಾಳೆ. ತೀವ್ರವಾಗಿ ಗಾಯಗೊಂಡ ದಿಲೀಪ್ ಅವರನ್ನು ಬಳಿಕ ಪತ್ನಿಯೇ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಚಾಕು ಹೃದಯದ ಮೇಲ್ಭಾಗಕ್ಕೆ ತಗುಲಿದ್ದರಿಂದ ಗಂಭೀರ ಗಾಯಗೊಂಡಿದ್ದ ದಿಲೀಪ್, ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತ ದಿಲೀಪ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ನರೋಡಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಊಟದ ವಿಚಾರವಾಗಿ ಆರಂಭವಾದ ಕೌಟುಂಬಿಕ ಕಲಹ ಮಾಜಿ ಸೈನಿಕನ ಪ್ರಾಣವನ್ನೇ ಬಲಿ ಪಡೆದಿದ್ದು, ಈ ಘಟನೆ ಸ್ಥಳೀಯವಾಗಿ ತೀವ್ರ ಆಘಾತ ಮೂಡಿಸಿದೆ.



