Kannada NewsLatestNational

*ಮತ್ತೊಂದು ಪಟಾಕಿ ದುರಂತ*: *ಒಂದೇ ಕುಟುಂಬದ 6 ಜನರು ಸಜೀವದಹನ*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ಅವಘಡದಲ್ಲಿ ಇನ್ನೂ ಜಗತ್ತನ್ನೇ ಸರಿಯಾಗಿ ನೋಡದ ಎರಡು ತಿಂಗಳ ಪುಟ್ಟ ಕಂದಮ್ಮ ಸೇರಿ ಒಂದೇ ಕುಟುಂಬದ ಆರು ಜನರು ಸಜೀವದಹನವಾಗಿದ್ದಾರೆ.

ಪಟಾಕಿ ಅಂಗಡಿಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ವಸತಿ ಕಟ್ಟಡಕ್ಕೆ ವ್ಯಾಪಿಸಿದ್ದು, ಘಟನೆಯಲ್ಲಿ ಒಂದು ಇಡೀ ಕುಟುಂಬವೇ ಬೆಂಕಿಯಲ್ಲಿ ಸುಟ್ಟುಹೋಗಿದೆ. ಕುಟುಂಬದ ಆರು ಜನರು ಸಜೀವದಹನವಾಗಿದ್ದಾರೆ.

ಪಟಾಕಿ ಅಂಗಡಿಯಿಂದ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಆವರಿಸಿ ಈ ದುರಂತ ಸಂಭವಿಸಿದೆ. ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬರಹಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ಇಲ್ಲಿನ ಪಟಾಕಿ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಭೀಕರ ಸ್ವರೂಪ ಪಡೆದುಕೊಂಡು ಪಕ್ಕದಲ್ಲಿದ್ದ ಮೂರು ಅಂತಸ್ತಿನ ವಸತಿ ಕಟ್ಟಡಕ್ಕೂ ವ್ಯಾಪಿಸಿದೆ.

ಕಟ್ಟಡದಾದ್ಯಂತ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಒಳಗಿದ್ದವರಿಗೆ ಹೊರಬರಲು ಸಾಧ್ಯವಾಗಲಿಲ್ಲ. ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಕೇವಲ ಎರಡು ತಿಂಗಳ ಹಸುಗೂಸು ಕೂಡ ಇದೆ.

ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕಟ್ಟಡದೊಳಗೆ ಸಿಲುಕಿದ್ದವರನ್ನು ಹೊರತರಲು ಜೆಸಿಬಿ ಯಂತ್ರದ ಸಹಾಯದಿಂದ ಗೋಡೆಯನ್ನು ಒಡೆದು ಕಾರ್ಯಾಚರಣೆ ನಡೆಸಲಾಗಿದೆ. ಬಳಿಕ ಒಳಗಿನಿಂದ ಆರು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Related Articles

Back to top button