Kannada NewsKarnataka NewsLatest

*ಸರ್ಕಾರಿ ಇಲಾಖೆಗಳ ತಾತ್ಕಾಲಿಕ ನೇಮಕಾತಿಗೆ ಇನ್ಮುಂದೆ ಪೊಲೀಸ್ ವೆರಿಫಿಕೇಷನ್ ಕಡ್ಡಾಯ!*

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ತಾತ್ಕಾಲಿಕ ಸಿಬ್ಬಂದಿ ನೇಮಕಾತಿಗೆ ಇನ್ಮುಂದೆ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ (Police Verification Certificate) ಕಡ್ಡಾಯಗೊಳಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರು (ಆಡಳಿತ) ನವೆಂಬರ್ 7, 2026 ರಂದು ರಾಜ್ಯದ 31 ಜಿಲ್ಲಾ ಉಪ ನಿರ್ದೇಶಕರಿಗೆ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.

ಹೈಕೋರ್ಟ್ ನಿರ್ದೇಶನದ ಹಿನ್ನೆಲೆ ಆದೇಶ:

ಪೊಲೀಸ್ ಇಲಾಖೆಯ ನಡವಳಿ ಸಂಖ್ಯೆ: ಡಿಸಿಪಿ/ಗು.ಪು/ಸಭೆ/01/2026, ದಿನಾಂಕ 08.09.2026 ರ ಉಲ್ಲೇಖದಂತೆ, ಸೆಪ್ಟೆಂಬರ್ 3, 2026 ರಂದು ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಕ್ರಿಮಿನಲ್ ಅಪೀಲ್ ನಂ. 1225/2016 ರಲ್ಲಿ ನೀಡಿದ ನಿರ್ದೇಶನಗಳ ಅನುಸಾರ ಚರ್ಚೆ ನಡೆದಿದೆ.

ವಲಸೆ ಕಾರ್ಮಿಕರ ಹಿನ್ನೆಲೆ ಪರಿಶೀಲನೆ, ಗುರುತು, ದೃಢೀಕರಣ, ನೋಂದಣಿ ವ್ಯವಸ್ಥೆ ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸುವ ಸಂಬಂಧ ನಡೆದ ಸಭೆಯ ಕ್ರಮ ಸಂಖ್ಯೆ 07 ರಲ್ಲಿ “ಎಲ್ಲಾ ಸರ್ಕಾರಿ ಇಲಾಖೆಗಳು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಬೇಕು” ಎಂದು ತಿಳಿಸಲಾಗಿದೆ.

ಏನಿದೆ ಆದೇಶದಲ್ಲಿ?

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧೀನ ಕಚೇರಿಗಳಲ್ಲಿ ಬಾಹ್ಯಮೂಲ/ ಹೊರಗುತ್ತಿಗೆ/ ಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಪಡೆಯುವಾಗ ಪೊಲೀಸ್ ಇಲಾಖೆಯ ನಡವಳಿಯಂತೆ ಬಾಹ್ಯಮೂಲ ನೌಕರರ ಕ್ರಿಮಿನಲ್ ಮೊಕದ್ದಮೆ ಬಗ್ಗೆ ಖಚಿತಪಡಿಸಿಕೊಂಡು, ಆ ನಂತರ ತಾತ್ಕಾಲಿಕ ನೌಕರರನ್ನು ನೇಮಿಸಿಕೊಳ್ಳಲು “ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ”ವನ್ನು ಕಡ್ಡಾಯವಾಗಿ ಪಡೆದು ಹಾಗೂ ನೌಕರರ ಗುರುತಿನ ಪುರಾವೆಗಳು, ದಾಖಲಾತಿಗಳು ಹಾಗೂ ತುರ್ತು ಸಂಪರ್ಕಕ್ಕೆ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ನಂತರ ನೇಮಕಾತಿ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
  • ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ ನೌಕರರ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯುವುದು ಎಂದೂ ಸ್ಪಷ್ಟಪಡಿಸಲಾಗಿದೆ.

ಈ ಆದೇಶದಿಂದ ಅಂಗನವಾಡಿ, ಬಾಲ ಮಂದಿರ ಸೇರಿದಂತೆ ಇಲಾಖೆಯಡಿ ಕಾರ್ಯನಿರ್ವಹಿಸುವ ಎಲ್ಲಾ ಹೊರಗುತ್ತಿಗೆ ನೌಕರರಿಗೆ ಪೊಲೀಸ್ ವೆರಿಫಿಕೇಷನ್ ಕಡ್ಡಾಯವಾಗಲಿದೆ. ಇದು ಮಕ್ಕಳ ಸುರಕ್ಷತೆ ಮತ್ತು ಇಲಾಖೆಯ ಪಾರದರ್ಶಕತೆಗೆ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

Related Articles

Back to top button