*ಇಬ್ಬರು ಬೈಕ್ ಸವಾರರ ಬಲಿ ಪಡೆದ ಕಾರು*: *ಕಿಲೋಮೀಟರ್‌ಗಟ್ಟಲೆ ಬೆನ್ನಟ್ಟಿ ಚಾಲಕನನ್ನು ಹಿಡಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಅತಿವೇಗವಾಗಿ ಬಂದ ಫಾರ್ಚುನರ್ ಕಾರು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಗಾಯಾಳುಗಳ ನೆರವಿಗೆ ಧಾವಿಸದೆ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಪೊಲೀಸರು ಕಿಲೋಮೀಟರ್‌ಗಟ್ಟಲೆ ಬೆನ್ನಟ್ಟಿ ಬಂಧಿಸಿದ್ದಾರೆ. ಈ ಸಿನಿಮೀಯ ಚೇಸ್‌ನ ದೃಶ್ಯಗಳು ಪೊಲೀಸರ ಮೊಬೈಲ್‌ನಲ್ಲಿ ಸೆರೆಯಾಗಿವೆ.
ದೇವನಹಳ್ಳಿ ತಾಲೂಕಿನ ಅತ್ತಿಬೆಲೆ ಸಮೀಪ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ. ದೇವನಹಳ್ಳಿ ಪಟ್ಟಣದ ಮಿಥುನ್ ಮತ್ತು ಕನಕ ಮೃತ ದುರ್ದೈವಿಗಳು. ಇಬ್ಬರೂ ಹೆದ್ದಾರಿಯಲ್ಲಿರುವ ಡಾಬಾಗಳಿಗೆ ಮೊಟ್ಟೆ ಮತ್ತು ಚಿಕನ್ ಪೂರೈಸುವ ಕೆಲಸ ಮಾಡುತ್ತಿದ್ದರು. ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಕಾರು ಚಾಲಕ ಗಾಯಾಳುಗಳ ನೆರವಿಗೆ ಧಾವಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಅಪಘಾತದ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಬಿದ್ದಿತ್ತು. ಇದನ್ನೇ ಸುಳಿವಾಗಿ ಪಡೆದ ಪೊಲೀಸರು ಕಾರಿನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅಪಘಾತ ಮಾಡಿ ಪರಾರಿಯಾಗುತ್ತಿದ್ದ ಫಾರ್ಚುನರ್ ಕಾರು ಚಿಕ್ಕಬಳ್ಳಾಪುರ ಮಾರ್ಗವಾಗಿ ತೆಲಂಗಾಣದತ್ತ ತೆರಳುತ್ತಿತ್ತು. ಮಾಹಿತಿ ಪಡೆದ ಪೊಲೀಸರು ಸೈರನ್ ಹಾಕಿ ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೂ ಚಾಲಕ ಕಾರು ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾನೆ.
ಪೊಲೀಸರು ಬೊಲೆರೋ ಗೂಡ್ಸ್ ವಾಹನವನ್ನು ಅಡ್ಡ ಹಾಕಿದರೂ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಕುಡಿದ ಅಮಲಿನಲ್ಲಿದ್ದ ಎನ್ನಲಾದ ಚಾಲಕ ಬೇಕಾಬಿಟ್ಟಿಯಾಗಿ ಕಾರು ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬೆನ್ನಟ್ಟಿದ್ದಾರೆ.
ಕೊನೆಗೆ ಇತರೆ ವಾಹನಗಳ ನೆರವಿನಿಂದ ಕಾರನ್ನು ತಡೆದು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರದ ಬಳಿ ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ ಹಿಟ್ ಆ್ಯಂಡ್ ರನ್ ಮಾಡಿ ಪರಾರಿಯಾಗುತ್ತಿದ್ದ ಕಾರು ಪೊಲೀಸರ ಕೈಗೆ ಸಿಕ್ಕಿದೆ.
ಸಂಪೂರ್ಣ ಚೇಸಿಂಗ್ ದೃಶ್ಯ ಪೊಲೀಸರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಪ್ರಕರಣ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಇಬ್ಬರ ಸಾವಿಗೆ ಕಾರಣವಾದ ಚಾಲಕನ ವಿರುದ್ಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




