*ವಿವಿಧ ಸಂಸ್ಥೆಗಳಲ್ಲಿ ದೀಪಾವಳಿ ಲಕ್ಷ್ಮೀ ಪೂಜೆ*: *ಸಿಬ್ಬಂದಿಗೆ ಲಕ್ಷ್ಮೀ ಹೆಬ್ಬಾಳಕರ್ ಶುಭಾಶಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ಅಂಗವಾಗಿ ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸೋಮವಾರ ತಮ್ಮ ಅಧೀನದ ವಿವಿಧ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ನಡೆದ ಶ್ರೀ ಲಕ್ಷ್ಮೀ ದೇವಿಯ ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು, ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಗಳ ಸದಸ್ಯರಿಗೆ ಹಬ್ಬದ ಶುಭಾಶಯಗಳನ್ನು ಕೋರಿದರು.

ಬೆಳಗಾವಿಯ ಹರ್ಷ ಶುಗರ್ಸ್ ನಿಯಮಿತದ ಕಚೇರಿಯಲ್ಲಿ ದೀಪಾವಳಿ ಪ್ರಯುಕ್ತ ಶ್ರೀ ಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿ, ದೇವಿಯ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿಯೂ ಲಕ್ಷ್ಮೀ ಪೂಜೆ ನೆರವೇರಿಸಿ, ಕಚೇರಿ ಸಿಬ್ಬಂದಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದರು.

ಹಿಂಡಲಗಾ ಗ್ರಾಮದ ವೆಂಗುರ್ಲಾ ರಸ್ತೆಯಲ್ಲಿರುವ ಲಕ್ಷ್ಮೀತಾಯಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಪ್ರಧಾನ ಕಚೇರಿಯಲ್ಲಿ ವರ್ಷಂಪ್ರತಿ ಸಂಪ್ರದಾಯದಂತೆ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಪೂಜೆಯಲ್ಲಿ ಪಾಲ್ಗೊಂಡ ಲಕ್ಷ್ಮೀ ಹೆಬ್ಬಾಳಕರ್ ಅವರು ಸಹಕಾರಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಸದಸ್ಯರಿಗೆ ಶುಭಾಶಯ ಕೋರಿದರು. ಬಳಿಕ ಸಿಬ್ಬಂದಿ ಮತ್ತು ಸದಸ್ಯರೊಂದಿಗೆ ಸಭೆ ನಡೆಸಿ, ಸಂಸ್ಥೆಯ ಪ್ರಗತಿ ಹಾಗೂ ಇದುವರೆಗೆ ಸಾಗಿ ಬಂದ ಹಾದಿಯನ್ನು ಸ್ಮರಿಸಿದರು.
ಇದಲ್ಲದೆ, ಡಾ. ಹಿತಾ ಎಂ. ಹೆಬ್ಬಾಳಕರ್ ಅವರ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ನಲ್ಲಿಯೂ ದೀಪಾವಳಿ ಲಕ್ಷ್ಮೀ ಪೂಜೆಯ ಸಂಭ್ರಮದಲ್ಲಿ ಭಾಗವಹಿಸಿ, ವೈದ್ಯರು ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಹಬ್ಬವನ್ನು ಆಚರಿಸಿದರು.

ವಿವಿಧ ಸಂಸ್ಥೆಗಳ ಸಿಬ್ಬಂದಿ ಹಾಗೂ ಸದಸ್ಯರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡ ಲಕ್ಷ್ಮೀ ಹೆಬ್ಬಾಳಕರ್ ಅವರು, ಎಲ್ಲರ ಬದುಕಿನಲ್ಲಿ ದೀಪಾವಳಿಯ ಬೆಳಕು ಸಂತೋಷ, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿದಂತೆ ಕುಟುಂಬದ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.




