*ಬಸವಶ್ರೀ ಪ್ರಶಸ್ತಿಯ ಶ್ರೇಯಸ್ಸು ಕೆಎಲ್ಇ ಸಂಸ್ಥೆಯ ಶಿಕ್ಷಕರು, ದಾನಿಗಳಿಗೆ ಸಲ್ಲುತ್ತದೆ*: *ಮಹಾಂತೇಶ ಕವಟಗಿಮಠ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವಣ್ಣನವರ ಹೆಸರಿನಲ್ಲಿ ನೀಡಲಾಗಿರುವ ಬಸವಶ್ರೀ ಪುರಸ್ಕಾರದ ಶ್ರೇಯಸ್ಸು ಕೆಎಲ್ಇ ಸಂಸ್ಥೆಯ ಎಲ್ಲ ಶಿಕ್ಷಕರು ಹಾಗೂ ದಾನಿಗಳಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ನಗರದ ಕಾರಂಜಿ ಮಠದಲ್ಲಿ ಶನಿವಾರ ನಡೆದ ಮಠದ 27ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಬಸವಶ್ರೀ ಪುರಸ್ಕಾರಕ್ಕೆ ಭಾಜನರಾದ ಮಹಾಂತೇಶ ಕವಟಗಿಮಠ ಹಾಗೂ ಅಶೋಕ ಐರನ್ ಗ್ರೂಪ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ ಹುಂಬರವಾಡಿ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಂತೇಶ ಕವಟಗಿಮಠ, ಸುಮಾರು 900 ವರ್ಷಗಳ ಹಿಂದೆ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ಮೂಲಕ ವರ್ಣರಹಿತ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಶ್ರಮಿಸಿದ್ದರು. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಗೌರವದ ಸಂಗತಿ. ಈ ಪ್ರಶಸ್ತಿಯನ್ನು ಕೆಎಲ್ಇ ಸಂಸ್ಥೆಯ ಶಿಕ್ಷಕರು, ದಾನಿಗಳು ಹಾಗೂ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಮಹನೀಯರಿಗೆ ಅರ್ಪಿಸುವುದಾಗಿ ತಿಳಿಸಿದರು.
ಒಂದು ಶತಮಾನದ ಹಿಂದೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳು ಮುಂಬೈ ಪ್ರಾಂತದ ಭಾಗವಾಗಿದ್ದ ಸಂದರ್ಭದಲ್ಲಿ ಸಪ್ತರ್ಷಿಗಳು ಕಂಡ ಶಿಕ್ಷಣ ಕ್ರಾಂತಿಯ ಕನಸು ಇಂದು ನನಸಾಗಿದೆ. ಕೆಎಲ್ಇ ಸಂಸ್ಥೆ ಪ್ರಸ್ತುತ 320 ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸುಮಾರು 1.20 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆ ಮಹತ್ವದ ಸೇವೆ ಸಲ್ಲಿಸುತ್ತಿದೆ ಎಂದರು.
ಕೆಎಲ್ಇ ಸಂಸ್ಥೆಯ ಬೆಳವಣಿಗೆಯಲ್ಲಿ ಅರಟಾಳ ರುದ್ರಗೌಡರು, ರಾಜಾ ಲಖಮಗೌಡರು, ಗಿಲಗಿಂಚಿ ಗುರುಸಿದ್ಧಪ್ಪನವರು, ಶಿರಸಂಗಿಯ ಲಿಂಗರಾಜರ ಟ್ರಸ್ಟ್ ಸೇರಿದಂತೆ ಅನೇಕ ಮಹನೀಯರ ಕೊಡುಗೆ ಅಪಾರವಾಗಿದೆ. ವೀರಶೈವ-ಲಿಂಗಾಯತ ಸಮುದಾಯದವರಷ್ಟೇ ಅಲ್ಲದೆ, ವಿವಿಧ ಜಾತಿ ಮತ್ತು ಸಮುದಾಯಗಳ ದಾನಿಗಳೂ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಅಂಕೋಲಾದ ವೆಂಕಟೇಶ ಧಂಬೋಜಿ, ಅಥಣಿಯ ರಣಮೋಡೆ ವಕೀಲರು ಹಾಗೂ ಡಾ. ಸಂಪತ್ ಕುಮಾರ್ ಶಿವನಗಿ ಸೇರಿದಂತೆ ಅನೇಕ ದಾನಿಗಳ ಸಹಕಾರದಿಂದ ಕೆಎಲ್ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸ್ಮರಿಸಿದರು.
ಇತ್ತೀಚೆಗೆ ಲೋಕಾರ್ಪಣೆಗೊಂಡ ಜಗದ್ಗುರು ಗಂಗಾಧರ ಮೂರುಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ನೀಡಿದ ಗಂಗಾಧರ ಮಹಾಸ್ವಾಮಿಗಳು, ತೋಂಟದಾರ್ಯ ಕಾಲೇಜಿಗೆ ಕೊಡುಗೆ ನೀಡಿದ ಗದಗಿನ ಪೂಜ್ಯರು ಹಾಗೂ ಲಿಂಗರಾಜ ಕಾಲೇಜಿಗೆ ದಾನ ನೀಡಿದ ಕಾರಂಜಿ ಮಠದ ಹಿಂದಿನ ಪೂಜ್ಯರ ಸೇವೆಯನ್ನು ಸ್ಮರಿಸಿದರು.
1920ರ ದಶಕದಲ್ಲಿ ಮುಂಬೈ ಶಾಸನಸಭೆಯ ಸದಸ್ಯರಾಗಿದ್ದ ಹಾಗೂ ಶಿಕ್ಷಣ ಸಚಿವರಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ಲಿಂಗರಾಜ ಕಾಲೇಜು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸಂಸ್ಥೆಯ ಜವಾಬ್ದಾರಿ ಮತ್ತು ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿ ಲಿಂಗರಾಜ ಕಾಲೇಜಿನ ಅಂದಿನ ಪ್ರಾಚಾರ್ಯ ನಂದೀಮಠ ಅವರ ಸೇವೆಯನ್ನು ಸ್ಮರಿಸಿದರು. ತಂದೆಯ ನಿಧನದ ಸುದ್ದಿ ತಿಳಿದಿದ್ದರೂ, ವಿಶ್ವವಿದ್ಯಾಲಯದ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಅವರ ಕರ್ತವ್ಯನಿಷ್ಠೆ ಇಂದಿಗೂ ಸ್ಮರಣೀಯವಾಗಿದೆ ಎಂದರು.
ಸಂಸ್ಥೆಯ ಬೆಳವಣಿಗೆಗೆ ತೆರೆಮರೆಯಲ್ಲಿ ಶ್ರಮಿಸಿದ ಅನೇಕ ಮಹನೀಯರು ತಮ್ಮ ಸೇವೆಯನ್ನು ಎಂದಿಗೂ ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲ. ಅಂತಹ ಎಲ್ಲ ಮಹನೀಯರಿಗೂ ಈ ಬಸವಶ್ರೀ ಪುರಸ್ಕಾರವನ್ನು ಅರ್ಪಿಸುತ್ತೇನೆ. ಈ ಸನ್ಮಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ವಹಿಸಿದ್ದರು. ಮಠದ ಉತ್ತರಾಧಿಕಾರಿ ಡಾ. ಶಿವಯೋಗಿ ದೇವರು, ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ, ನಂದಗಡ ವಿರಕ್ತಮಠದ ಚನ್ನವೀರ ದೇವರು, ಜಾನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ, ಎ.ಕೆ. ಪಾಟೀಲ, ರಾಜಶೇಖರ ಪಾಟೀಲ ಹಾಗೂ ವಿ.ಕೆ. ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.



