*ವರ್ಗಾವಣೆಯಲ್ಲಿ ಒಂದೇ ಒಂದು ಪೈಸೆ ಮುಟ್ಟಿದ್ದರೆ ಹಾಸನಾಂಬೆ ನೋಡಿಕೊಳ್ಳಲಿ*; *ಇಲ್ಲ ಆರೋಪ ಮಾಡಿದವರನ್ನು ನೋಡಿಕೊಳ್ಳಲಿ ಎಂದ ಸಚಿವ ಶಿವಲಿಂಗೇಗೌಡ*

ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾಡಿರುವ ಲಂಚದ ಆರೋಪ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸುಳ್ಳು ಆರೋಪ ಎಂದು ಡಿಸಿ ಕುಮಾರಸ್ವಾಮಿ ಆರೋಪಗಳಿಗೆ ಕೌಂಟರ್ ನೀಡಿದ್ದಾರೆ. ಇದೀಗ ಸಚಿವ ಕೆ.ಎಂ ಶಿವಲಿಂಗೇಗೌಡ ಕೂಡ ಪ್ರತಿಕ್ರಿಯಿಸಿದ್ದಾರೆ.
’‘ಹಾಸನಾಂಬೆ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ, ಡಿಸಿ ವರ್ಗಾವಣೆ ವಿಚಾರದಲ್ಲಿ 1 ಪೈಸೆ ಮುಟ್ಟಿದ್ದರೆ ತಾಯಿ ನೋಡಿಕೊಳ್ಳಲಿ. ಇಲ್ಲದಿದ್ದರೆ ಯಾರು ಆರೋಪ ಮಾಡಿದ್ರೋ ಅವರನ್ನು ನೋಡಿಕೊಳ್ಳಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶಿವಲಿಂಗೇಗೌಡ, ‘ಹಾಸನಾಂಬೆ ಜಾತ್ರೆ ವೇಳೆ ಇಂತಹ ಆರೋಪ ಮನಸ್ಸಿಗೆ ಆಘಾತವಾಗಿದೆ. ಎಫ್ಎಸ್ಎಲ್ ವರದಿ ಬರುವವರೆಗೂ ಮಾತಾಡಲ್ಲ. ಇನ್ನು 15 ದಿನಗಳಲ್ಲಿ ಎಫ್ಎಸ್ಎಲ್ ವರದಿ ಬರಲಿದೆ. ಆ ವಾಟ್ಸಾಪ್ ಚಾಟ್ನಲ್ಲಿ ಅವನ ನಂಬರ್ ಕಾಣಲ್ಲ, ಹೆಸರು ಕಾಣುತ್ತೆ. ನೀವು ಸಚಿವರಾಗಿ ಹಾಸನಕ್ಕೆ ಒಂದೇ ಒಂದು ಕೈಗಾರಿಕೆ ಬಂತಾ? ಇದು ಹೊರಗೆ ಬಂದಾಗಿದೆ ಎಫ್ಐಆರ್ ಆಗಿದೆ. ಇದನ್ನ ಕಾನೂನು ಪ್ರಕಾರ ಎದುರಿಸುತ್ತೇವೆ. ಇದರಲ್ಲಿ ಯಾರೇ ಅಪರಾಧ ಮಾಡಿದರೂ ಸಿಕ್ಕಿಬೀಳುತ್ತಾರೆ’ ಎಂದಿದ್ದಾರೆ.
‘ಕುಮಾರಸ್ವಾಮಿ ಒಂದು ಸಂಭಾಷಣೆಯ ಪ್ರತಿ ಬಿಡುಗಡೆ ಮಾಡಿದ್ದಾರೆ. ಇನ್ನೊಬ್ಬರು ಮಾತಾಡಿರುವ ವ್ಯಕ್ತಿ ಯಾರು ಅನ್ನೋದು ಅಲ್ಲಿ ಕಾಣಲ್ಲ. ಎಐ ಯುಗದಲ್ಲಿ ಯಾರನ್ನು ಬೇಕಾದರು ಬಿತ್ತರಿಸುವುದನ್ನು ನೋಡಿದ್ದೇವೆ. ಕುಮಾರಸ್ವಾಮಿ ಆಧಾರ ಇಲ್ಲದೆ ಎಐ ಚಾಟ್ ಬಗ್ಗೆ ಹೇಳಿದ್ದಾರೆ. ಯಾರು ಯಾರ ಜತೆ ಮಾತನಾಡಿದ್ದರೆಂದು ಹೇಳಿದ್ದರೆ ಘನತೆ ಬರೋದು. ತಂದುಕೊಟ್ಟವರು ಯಾರು ಎಂದು ಕುಮಾರಸ್ವಾಮಿ ಧೈರ್ಯವಾಗಿ ಹೇಳಲಿ. ಈ ಚಾಟ್ FSLಗೆ ಹೋಗುತ್ತೆ, ಸತ್ಯ ಗೊತ್ತಾದಾಗ ನಿಮ್ಮ ಗೌರವ ಏನಾಗುತ್ತೆ. ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಕೇಸ್ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಶಿವಲಿಂಗೇಗೌಡ ಸಚಿವ ಆಗಿದ್ದಾನೆ ಎಂದು ಹೀಗೆ ಮಾಡುತ್ತೀರಲ್ಲಾ, ಯಾರ ಬಳಿಯಾದರೂ ಲಂಚ ತೆಗೆದುಕೊಂಡಿದ್ದನ್ನು ತೋರಿಸುತ್ತೀರಾ? ನಿಮ್ಮ ಬಳಿ 20 ವರ್ಷ ಇದ್ದೆ, ಇದು ನಿಮ್ಮ ಮನಸ್ಸಿಗೆ ಒಪ್ಪುತ್ತಾ? ನಾನು ಘೋರ ಅಪರಾಧ ಮಾಡಿದ್ದರೆ ಸಚಿವ ಸ್ಥಾನದಿಂದ ತೆಗೆಸಿಹಾಕಿ’ ಎಂದಿದ್ದಾರೆ.
‘ಡಿಸಿ ಪಿಎ ಶಶಿಕಿರಣ್ ಪೊಲೀಸರಿಗೆ ದೂರು ಕೊಟ್ಟು ಎಫ್ಐಆರ್ ಮಾಡಿಸಿದ್ದಾನೆ. ಅವರ ಮೊಬೈಲ್ ಸರೆಂಡರ್ ಮಾಡಿ ಬಂದಿದ್ದಾರೆ. ಆ ಚಾಟ್ ನನ್ನದೇ ಆಗಿದ್ದರೆ ಶಿಕ್ಷೆಗೆ ಗುರಿಯಾಗ್ತೀನಿ ಎಂದು ಹೇಳಿದ್ದಾನೆ. ಬಡವರ ಮಕ್ಕಳು ಹೇಗೋ ದಡ ಸೇರಿದ್ದೀವಿ, ಏಕೆ ತೊಂದರೆ ಕೊಡ್ತೀರಾ? ನನಗೆ ಮಾನಸಿಕವಾಗಿ ಆಘಾತವಾಗಿದೆ. ಕೇಂದ್ರದ ಮಂತ್ರಿಯಾಗಿ ಇಂತಹ ಚಾಟ್ ಬಿಡುಗಡೆ ಮಾಡುತ್ತೀರಲ್ಲಾ, ನನ್ನ ವಿರುದ್ಧದ ಆರೋಪ ಸಾಬೀತಾದರೆ, ನಾನು ಶಿಕ್ಷೆ ಅನುಭವಿಸುತ್ತೇನೆ. ಇದು ಸುಳ್ಳು ಎಂದಾದರೆ ನನ್ನ ಮಾನಹಾನಿಗೆ ಬೆಲೆ ಕಟ್ಟೋರು ಯಾರು’ ಎಂದು ಸಚಿವ ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.




